ಡೆಂಘೀ: 5 ಪ್ರಕರಣ ದಾಖಲು ಕಡೂರು ಕೃಷ್ಣಮೂರ್ತಿ
ಕ.ಪ್ರ.ವಾರ್ತೆ, ಕಡೂರು, ಮೇ 28
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿಯೂ ಡೆಂಘೀ ಜ್ವರಕ್ಕೆ ಸಂಬಂಧಿಸಿದಂತೆ 5 ಪ್ರಕರಣಗಳು ದಾಖಲಾಗಿ, ತಾಲೂಕಿನ ಕೆಲವು ಆಸ್ಪತ್ರೆಗಳಿಗೆ ಜನ ಚಿಕಿತ್ಸೆ ಪಡೆಯುತಿದ್ದಾರೆ. 2 ವರ್ಷದ ಹಿಂದೆ ಮಹಾಮಾರಿಯಂತೆ ಡೆಂಘೀ ಕಾಲಿಡುವ ಮೂಲಕ ರಾಜ್ಯದ ಹಲವೆಡೆ ಸಾವು ನೋವು ಸಂಭವಿಸಿತ್ತು.
ಇದೀಗ ಕಡೂರು ತಾಲೂಕಿನಲ್ಲಿ ಈ ರೀತಿ ಡೆಂಘೀ ಸೋಂಕು ಹೊಂದಿರುವ 5 ಪ್ರಕರಣ ದಾಖಲಾಗಿವೆ. ಕಡೂರು ತಾಲೂಕಿನ ನಿಡಘಟ್ಟ, ಮತಿಘಟ್ಟ, ಸೋಮಹಳ್ಳಿ, ಬೀರೂರು, ಬೀರೂರು ಸಮೀಪದ ಬಿ. ಕೋಡೀಹಳ್ಳಿ ಮತ್ತು ಎಸ್. ಮಾದಾಪುರ ಗ್ರಾಪಂ ವ್ಯಾಪ್ತಿಯ ಸಿದ್ರಾಮನಹಳ್ಳಿಯ ಹಲವರು ಕಡೂರು ,ಚಿಕ್ಕಮಗಳೂರು, ಶಿವಮೊಗ್ಗ ಮತ್ತಿತರ ಕಡೆ ಚಿಕಿತ್ಸೆಗೆ ದಾಖಲಾಗಿದೆ.
ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿದಿನ ಜ್ವರ ಕೈ ಕಾಲು ನೋವು ಎಂದು ಚಿಕಿತ್ಸೆ ಪಡೆದು ಹೋಗುತ್ತಿರುವುದರಿಂದಾಗಿ ಇದು ಡೆಂಘೀ ಜ್ವರದ ಪ್ರಕರಣ ಎಂದು ಸರಿಯಾಗಿ ದಾಖಲಾಗುತ್ತಿಲ್ಲ.
ರಕ್ತ ಪರೀಕ್ಷೆ: ಬೀರೂರು ಸೇರಿದಂತೆ ನಿಡಘಟ್ಟ, ಮತಿಘಟ್ಟ, ಸೋಮಹಳ್ಳಿ ಮತ್ತು ಸಿದ್ರಾಮನಹಳ್ಳಿ, ಬೀರೂರು ಸೇರಿದಂತೆ ಜ್ವರದಿಂದ ಬಳಲಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಒಂದೆರಡು ವ್ಯಕ್ತಿಗಳ ರಕ್ತ ಪಡೆದು ಲ್ಯಾಬ್ಗೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿರುವ ವೈದ್ಯರು, ತಾಲೂಕಿನ ಆರೋಗ್ಯ ವೈದ್ಯಾಧಿಕಾರಿ ಮತ್ತು ವೈದ್ಯರು, ಆಶಾ ಕಾರ್ಯಕರ್ತೆಯರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ತಿಳಿವಳಿಕೆ ಮೂಡಿಸಿ ಜ್ವರ ಪೀಡಿತರಿಗೆ ಅಗತ್ಯ ಔಷಧಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ವೈದ್ಯರು ಹೇಳುವಂತೆ ಜನ ತಮ್ಮ ಮನೆಯ ಮುಂದೆ ನೀರಿನ ತೊಟ್ಟಿಯಲ್ಲಿ ಸೊಳ್ಳೆ ನಿಲ್ಲದಂತೆ ಮುಚ್ಚಬೇಕು, ತೆಂಗಿನ ಚಿಪ್ಪು ಮತ್ತು ಹಳೆ ಟೈರುಗಳಲ್ಲಿ ನೀರು ನಿಂತಲ್ಲಿ ಸೊಳ್ಳೆ ಕಚ್ಚುವುದರಿಂದ ಡೆಂಘೀ ಬರುವ ಸಾದ್ಯತೆ ಇದೆ.
ಲಾರ್ವಾ ಉತ್ಪತ್ತಿ: ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ನಬಾರ್ಡ್ನಿಂದ ನೀರಿನ ತೊಟ್ಟಿ ನೀಡುತ್ತಿದ್ದು ಇದರಲ್ಲಿ ಮುಸರೆ ಅಥವಾ ನೀರಿಗೆ ಸೊಳ್ಳೆ ಮೊಟ್ಟೆಯನ್ನಿಟ್ಟು ಮರಿ ಮಾಡುವುದರಿಂದ ಲಾರ್ವಾಗಳು ಉತ್ಪತ್ತಿಯಾಗಿ ಈ ರೋಗ ಹರಡಲು ಕಾರಣವಾಗಲಿದೆ.
ಡೆಂಘೀ ಸೋಂಕಿತ ರೋಗವಲ್ಲ ಆದರೆ ಸೊಳ್ಳೆಗಳಿಂದ ಬರುವ ರೋಗವಾಗಿದ್ದು, ಜನ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ, ಗುಂಡಿ, ಗೊಟರು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಎನ್ನುತ್ತಾರೆ.
ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ ಎಸ್.ಕೆ. ಪ್ರಭು ಮಾಹಿತಿ ನೀಡಿ, ಕಡೂರು ತಾಲೂಕಿನಾದ್ಯಂತ ಇದುವರೆಗೂ ಡೆಂಘೀ ಸೋಂಕಿತ ಎಂದು ತಾಲೂಕಿನ ಮತಿಘಟ್ಟ, ನಿಢಘಟ್ಟ, ಸೋಮಹಳ್ಳಿ ಬೀರೂರು ಮತ್ತು ಬಿ. ಕೋಡೀಹಳ್ಳಿ, ಸಿದ್ರಾಮನಹಳ್ಳಿ ಸೇರಿದಂತೆ ಒಟು 5 ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರು ಗುಣಮುಖರಾಗುತ್ತಿದ್ದಾರೆ. ಒಂದಿಬ್ಬರ ರಕ್ತದ ಸ್ಯಾಂಪಲ್ಲನ್ನು ಲ್ಯಾಬಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಡೆಂಘೀ ಹೌದೇ, ಅಲ್ಲವೇ ಎಂಬ ಬಗ್ಗೆ ದೃಢಪಡಲಿದೆ ಎಂದರು.
ಸಮರೋಪಾದಿಯಲ್ಲಿ ಕ್ರಮ: ಡೆಂಘೀ ಹರಡದಂತೆ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಆರೋಗ್ಯ ಇಲಾಖೆ 215 ಆಶಾ ಕಾರ್ಯಕರ್ತೆಯರು, 261 ಎ.ಎನ್.ಎಂಗಳು. 110 ಎನ್ಜಿಒಗಳು, ವೈದ್ಯರು ಸೇರಿದಂತೆ ಒಟ್ಟು 400 ಜನರನ್ನು ಡೆಂಘೀ ನಿರ್ಮೂಲನಾ ಕಾರ್ಯಕ್ರಮಕ್ಕೆ ಬಳಸಿಕೊಂಡು ಅರಿವು ಮೂಡಿಸಿ ಅಗತ್ಯ ಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಜೊತೆಗೆ ನರ್ಸಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಪ್ರಭು ತಿಳಿಸಿದರು.