ರಸ್ತೆ ಕಾಮಗಾರಿ ಕಳಪೆ: ಆರೋಪ
ಕ.ಪ್ರ.ವಾರ್ತೆ, ಮೂಡಿಗೆರೆ, ಮೇ 28
ಪಟ್ಟಣದ ಗಂಗನಮಕ್ಕಿಯಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆಯುತ್ತಿರುವ ಕುರಿತು ಸಾರ್ವಜನಿಕರ ವ್ಯಾಪಕ ಆರೋಪಗಳ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ತೆರಳಿದ ಶಾಸಕ ಬಿ.ಬಿ. ನಿಂಗಯ್ಯ ಅಧಿಕಾರಿಗಳ ತಂಡದಿಂದ ಕ್ಯೂಬ್ ಟೆಸ್ಟ್ ನಡೆಸಿದ್ದು, ವರದಿ ಬಂದ ಬಳಿಕ ಕ್ರಮ ಜರುಗಿಸುದಾಗಿ ತಿಳಿಸಿದರು.
ಈ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಂದ ದಿನದಿಂದ ದಿನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ವಾರವಷ್ಟೇ ಕೇವಲ 10 ದಿನಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸುವ ಭರವಸೆ ನೀಡಿ ಕೆಲಸ ಪ್ರಾರಂಭಿಸಲಾಗಿತ್ತು. ಆದರೆ ಐದು ದಿನಗಳಲ್ಲಿ ಕೇವಲ 200ಮೀಟರ್‌ನಷ್ಟು ಮಾತ್ರ ಕೆಲಸ ನಡೆದಿದೆ. ಮೇ 24 ರಂದು ಜಿಲ್ಲಾಧಿಕಾರಿ ಯಶ್ವಂತ್ ಆದೇಶ ಹೊರಡಿಸಿ ವಾಹನ ಸಂಚಾರ ನಿರ್ಬಂಧಿಸಿದ್ದರೂ, ಭಾರಿ ಗಾತ್ರದ ವಾಹನ ಸಂಚಾರದೊಂದಿಗೆ ಆದೇಶ ಉಲ್ಲಂಘನೆಯಾಗುತ್ತಿದೆ ಎಂದರು.
ಮನವಿ: ಈ ಬಗ್ಗೆ ಮೇಲಿಂದ ಮೇಲೆ ಸಾರ್ವಜನಿಕರಿಂದ ಬರುತ್ತಿರುವ ಆರೋಪ ಗಮನಿಸಿರುವ ಶಾಸಕ ನಿಂಗಯ್ಯ, ಸಾರ್ವಜನಿಕರು ಮತ್ತು ಮಾಧ್ಯಮದವರು ರಸ್ತೆ ಕಾಮಗಾರಿ ಮುಕ್ತಾಯದವರೆಗೆ ಅಸಹಕಾರ ತೋರಿಸದಿರುವಂತೆ ಮನವಿ ಮಾಡಿದರು.
ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟ ನಡೆಸಲು ಅವಕಾಶ ನೀಡುವುದಿಲ್ಲ. ಕಳಪೆ ಗುಣಮಟ್ಟ ನಡೆದಿದ್ದರೆ ಮಾಪನಕಾರರು ಪರೀಕ್ಷೆ ನಡೆಸಿದ ನಂತರ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ತಪ್ಪುಮಾಡಿಲ್ಲ: ಪಪಂ ಎಂಜಿನಿಯರ್ ಜಯಸಿಂಗ್ ನಾಯಕ್ ಮಾತನಾಡಿ, ತಮ್ಮಿಂದ ತಪ್ಪು ನಡೆದಿಲ್ಲ. ಕಾಮಗಾರಿ ಪ್ಲಾನಿಂಗ್ ಪ್ರಕಾರ ನಡೆಯುತ್ತಿದೆ. ರಸ್ತೆ ಮಧ್ಯೆ ಬಿರುಕು ಬಿಟ್ಟಿಲ್ಲ. ಜಾಯಿಂಟ್ ಮಾತ್ರ ಬಿರುಕು ಬಿಟ್ಟಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದರೆ ತಮ್ಮ ವಿರುದ್ಧ ಉಗ್ರ ಕ್ರಮ ಜರುಗಿಸಬಹುದು. ಆದರೆ ಕಾಮಗಾರಿ ಮುಕ್ತಾಯಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ತಹಸಿಲ್ದಾರ್ ರುದ್ರಪ್ಪಾಜಿ ರಾವ್, ವೃತ್ತ ನಿರೀಕ್ಷಕ ರಮೇಶ್, ಸಹುಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಪಪಂ ಎಂಜಿನಿಯರ್ ಗಣೇಶ್, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ರಂಜನ್ ಅಜೀತ್ ಕುಮಾರ್, ತಾಪಂ ಸದಸ್ಯ ಸುಬ್ರಾಯ ಇದ್ದರು.