ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀರು ಪೂರೈಕೆಯಲ್ಲಿ ಕೋಟ್ಯಂತರ ರು. ಲೂಟಿ

Lingaraj Badiger
Updated On : 30 May 2013, 10:51 am

ಕನ್ನಡಪ್ರಭ ವಾರ್ತೆ, ಮೂಡಿಗೆರೆ,  ಮೇ 29
ತಾಲೂಕಿನ ಕಳಸ ಮತ್ತು ಬಾಳೂರು ಹೋಬಳಿ ಹೊರತುಪಡಿಸಿ ಉಳಿದ 15ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೋಟ್ಯಂತರ ರು. ಲೂಟಿ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ಅಮರನಾಥ್ ಆರೋಪಿಸಿದರು.  
ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಿಂದ 2012ರವರೆಗೆ ಗ್ರಾಪಂಗಳಲ್ಲಿ ಕುಡಿವ ನೀರು ಪೂರೈಕೆಗೆ ಸಂಬಂಧಿಸಿದಂತೆ ಮೋಟರ್ ಹಾಗೂ ಕೈಪಂಪು ರಿಪೇರಿ ಹೆಸರಲ್ಲಿ ನಕಲಿ ಬಿಲ್ ಹಾಗೂ ಕೋಟೇಶನ್‌ಗಳನ್ನು ಸೃಷ್ಟಿ ಮಾಡಿ, ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ಅವರು ಆರೋಪಿಸಿದರು.
ತೆರಿಗೆ ವಂಚನೆ: ದುರಸ್ತಿ ಕಾರ್ಯಗಳಿಗೆಂದು ನೀಡಿದ ಎಲ್ಲಾ ಬಿಲ್‌ಗಳಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿ ಮಾಡಿದ ಬಗ್ಗೆ ಮಾಹಿತಿ ಇರುವುದಿಲ್ಲ. ಲಕ್ಷಾಂತರ ರು. ಬಿಲ್ ಪಾವತಿಸಿದ್ದರೂ, ಯಾವುದೇ ಬಿಲ್‌ನಲ್ಲಿ ಟಿನ್ ಸಂಖ್ಯೆ ಕಂಡುಬರುತ್ತಿಲ್ಲ ಎಂದು ದೂರಿದರು.
ವಿನಾಯಕ ಮೋಟರ್ ಡ್ರೈವಿಂಗ್ ವರ್ಕ್ಸ್, ವಿನ್‌ಎಲೆಕ್ಟ್ರಿಕಲ್ಸ್ ಹಾಗೂ ವಿಶ್ವಾಸ್ ಮೋಟರ್ ರಿವೈಂಡಿಂಗ್ ಹೆಸರಿನಲ್ಲಿ ಕೊಟೇಶನ್ ನೀಡಲಾಗಿದ್ದು, ಈ ಮೂರು ಸಂಸ್ಥೆಗಳನ್ನು ಹೊರತುಪಡಿಸಿ, ಬೇರಾವ ಸಂಸ್ಥೆಯೂ ಕೂಡ ಯಾವುದೇ ಗ್ರಾಪಂಗಳಿಗೆ ಕೊಟೇಶನ್ ನೀಡದಿರುವುದು ಅನುಮಾನಕ್ಕೆ ಆಸ್ಪದವಾಗಿದೆ.
ಅನುಮಾನಕ್ಕೆ ಆಸ್ಪದ: ಅಲ್ಲದೇ ಎಲ್ಲಾ ಟೆಂಡರ್‌ಗಳಲ್ಲಿ ಸಣ್ಣ ಮೊತ್ತದ ಹಣ ವ್ಯತ್ಯಾಸಗೊಳಿಸಿ ಇಡೀ ತಾಲೂಕಿನ ಎಲ್ಲಾ ಪಂಚಾಯಿತಿಗಳ ಮೋಟರ್ ರಿಪೇರಿ ಗುತ್ತಿಗೆಯನ್ನು ವಿನಾಯಕ ಮೋಟರ್ ವೈಂಡಿಂಗ್ ವರ್ಕ್ಸ್‌ಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾಮಗ್ರಿಗಳ ಖರೀದಿ ಹೆಸರಲ್ಲಿ ಮೂಡಿಗೆರೆ ನಗರದಲ್ಲಿ ಅಸ್ತಿತ್ವದಲ್ಲಿಲ್ಲದ ಅಂಗಡಿಗಳ ಹೆಸರುಗಳಲ್ಲಿ ಕೊಟೇಷನ್ ನೀಡಲಾಗಿದೆ ಎಂದು ಆರೋಪಿಸಿದರು.
ಕುಡಿಯುವ ನೀರಿನ ಅಭಾವ ಇರುವುದನ್ನು ಮನಗಂಡ ಸರ್ಕಾರ ಈ ಸಮಸ್ಯೆ ಪರಿಹಾರಕ್ಕಾಗಿ ಲಕ್ಷಾಂತರ ರೂ.  ಬಿಡುಗಡೆ ಮಾಡುತ್ತಿದ್ದರೆ ಇದನ್ನು ದುರ್ಬಳಕೆ ಮಾಡಲಾಗುತ್ತಿದ್ದು, ಇಂತಹ ಭಾರೀ ಅವ್ಯವಹಾರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಕಾರ್ಯದರ್ಶಿ, ತಾಪಂ ಅಧಿಕಾರಿಗಳು ಹಾಗೂ ಇದಕ್ಕೆ ಸಂಬಂಧಿಸಿದ ಅಭಿಯಂತರರು ಶಾಮೀಲಾಗಿದ್ದಾರೆ ಎಂದು ದೂರಿದರು.
ಈ ಬಗ್ಗೆ ಲೋಕಾಯುಕ್ತ ಹಾಗೂ ಜಿಪಂ ಕಾರ್ಯದರ್ಶಿಗಳು ಸೂಕ್ತ ತನಿಖೆ ನಡೆಸಿ ಸರ್ಕಾರಕ್ಕೆ ಆಗಿರುವ ನಷ್ಟ  ಭರಿಸಿಕೊಡುವುದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement