ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲಿ: ನಿಂಗಯ್ಯ
ಕನ್ನಡಪ್ರಭ ವಾರ್ತೆ, ಮೂಡಿಗೆರೆ, ಮೇ 29
ಕೃಷಿ ಪ್ರಧಾನವಾಗಿರುವ ದೇಶದಲ್ಲಿ ಕೃಷಿ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತಾಗಬೇಕು ಎಂದು ಶಾಸಕ ಬಿ.ಬಿ. ನಿಂಗಯ್ಯ ಹೇಳಿದರು.
ಪಶು ಇಲಾಖೆಯ ಕಚೇರಿಯ ಆವರಣದಲ್ಲಿ ನಡೆದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರವನ್ನು ವಿತರಣೆ ಮಾಡಿ ಮಾತನಾಡಿ, ಸರ್ಕಾರ ರೈತರು ಬೆಳೆಯುವ ಬೆಳೆಗಳಿಗೆ 10 ಸಾವಿರ ಖರ್ಚು ಬಂದರೆ 5 ಸಾವಿರ ಸಬ್ಸಿಡಿ ನೀಡಬೇಕು. ವಿವಿಧ ಯೋಜನೆಗಳಲ್ಲಿ ಬರುವ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ವಿವಿಧ ತಳಿಯ ರಾಸುಗಳಿಗೆ ಆಹಾರವಾಗಬಹುದಾದ ಹುಲ್ಲು ಯಾವುವೆಂದು ತಿಳಿದು ಅವುಗಳನ್ನು ತಮ್ಮ ಜಮೀನಿನಲ್ಲೇ ಬೆಳೆಯಬೇಕು. ರೈತರು ಶ್ರದ್ದೆಯಿಂದ ವಿವಿಧ ಜಾತಿಯ ಹುಲ್ಲು ಗದ್ದೆಯಲ್ಲೇ ಬೆಳೆದರೆ ರಾಸುಗಳಿಗೆ ಉತ್ತಮ ಆಹಾರವಾಗುವುತ್ತದೆ. ಅಲ್ಲದೆ ಅವು ಕೊಡುವ ಹಾಲಿನಿಂದ ಹೆಚ್ಚಾಗಿ ಆರ್ಥಿಕ ಲಾಭ ಹೊಂದಬಹುದು ಎಂದರು.
ಜಾನುವಾರು ಹೊಂದಿದವರು, ಹುಲ್ಲು ಬೆಳೆದವರು, ತಕ್ಕ ಜಮೀನು ಹೊಂದಿದವರು ಮೇವು ಕತ್ತರಿಸುವ ಯಂತ್ರ ಪಡೆದರೆ ಉಪಯೋಗವಾಗಲಿದೆ ಎಂದು ಸಲಹೆ ನೀಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ವೇಣುಗೋಪಾಲ್ ಮಾತನಾಡಿ, ಮೇವು ಕತ್ತರಿಸುವ ಯಂತ್ರ ಹುಲ್ಲನ್ನು ಹಾಳಾಗದಂತೆ ಹಸುಗಳಿಗೆ ತಿನ್ನಲು ಅನುಕೂಲಕರ ರೀತಿಯಲ್ಲಿ ಕತ್ತರಿಸುತ್ತದೆ ಎಂದರು. ಜಿಪಂ ಸದಸ್ಯ ಅನಂತ್, ರಂಜನ್ ಅಜಿತ್ ಕುಮಾರ್, ನೇಪಾ ಆದಿತ್ಯ, ಅಣಜೂರು ಸುಬ್ರಾಯಗೌಡ, ಪಶುವೈದ್ಯ ರಮೇಶ್, ಸುದೇಶ್, ನವೀನ್ ಇದ್ದರು.