ಅಪಾರ ಪ್ರಮಾಣದ ಬೆಳೆ ನಷ್ಟ
ತರೀಕೆರೆ: ಸಮೀಪದ ತಣಿಗೇಬೈಲು, ಜಯಪುರ, ತಿಮ್ಮನಬೈಲು, ಹುಣಸೇಬೈಲು, ನಂದಿಬಟ್ಟಲು ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆ ಮತ್ತು ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದ್ದು, ರೈತರಿಗೆ ಕೋಟ್ಯಂತರ ರು.ಗಳ ಬೆಳೆ ನಷ್ಟವುಂಟಾಗಿದೆ.
ಸಂಬಂದಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಬಡ ರೈತರಿಗೆ ಪರಿಹಾರ ಕಲ್ಪಿಸಿ ಕೊಡಬೇಕೆಂದು ರೈತ ಅಬೂಬಕರ್ ಕುಟ್ಟಿ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಪ್ರತಿದಿನ ಸಂಜೆಯ ನಂತರ ಕಾಡುಪ್ರಾಣಿಗಳು ಗ್ರಾಮಗಳಿಗೆ ಬಂದು ರೈತರು ಬೆಳೆದಿರುವ ಅಡಕೆ ಬಾಳೆ ತೆಂಗು ಮತ್ತಿತರ ಬೆಳೆಗಳನ್ನು ತಿಂದು ತುಳಿದು ಹಾಳುಗೆಡುವುತ್ತಿರುವುದರಿಂದ
ಕಟಾವಿಗೆ ಬಂದಿರುವ ಅನೇಕ ಬೆಳೆಗಳು ನಷ್ಟವುಂಟಾಗುತ್ತಿದ್ದು ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.
ಕಳೆದ ಬೇಸಿಗೆಯಲ್ಲಿ ಕೊಳವೆ ಬಾವಿ ಸೇರಿದಂತೆ ನೀರಿನ ಮೂಲಗಳೆಲ್ಲವೂ ಬತ್ತಿ ಹೋಗಿದ್ದರೂ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಸಂಪೂರ್ಣ ಹಾಳುಗೆಡವಿರುವ ಕಾಡುಪ್ರಾಣಿಗಳಿಂದಾಗಿ ರೈತರು ವಿವಿಧ ಬ್ಯಾಂಕುಗಳಲ್ಲಿ ಪಡೆದಿರುವ ಸಾಲ ತೀರಿಸಲಾಗದೆ. ಪರದಾಡುವ ಸ್ಥಿತಿ ಬಂದಿದ್ದು, ತಣಿಗೇಬೈಲಿನ ಭದ್ರಾ ವನ್ಯಜೀವಿ ಇಲಾಖೆ ಅಧಿಕಾರಿಗಳು ಗಮನ ಹರಿಸಿ ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಜೀವಭಯ: ಅಲ್ಲದೆ ಬೆಳೆ ತಿನ್ನಲು ಬರುತ್ತಿರುವ ಕಾಡುಪ್ರಾಣಿಗಳಿಂದ ಜನರಿಗೂ ಜೀವಭಯ ಉಂಟಾಗುತ್ತಿದೆ. ಅನೇಕ ಸಾರಿ ಕಾಡು ಪ್ರಾಣಿಗಳ ಧಾಳಿಯಿಂದ ಗ್ರಾಮಸ್ಥರು ಕೂದಲೆಳೆ ಅಂತರದಿಂದ ಜೀವ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದು ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.