ಕೃಷಿ ಚಟುವಟಿಕೆ ಬಿರುಸು
ಬೀರೂರು: ಕಸಬಾ ಹೋಬಳಿಯಲ್ಲಿ ಇತ್ತೀಚೆಗೆ ಬಂದ ಮಳೆ ರೈತರಲ್ಲಿ ಬಿತ್ತನೆ ಕುರಿತು ಆಶಾಕಿರಣ ಮೂಡಿಸಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.
ಬುಧವಾರ ರೈತರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಯಲ್ಲಿ ತೊಡಗಿದ್ದರು. ಬೀಜ ವಿತರಣೆ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಸಂಪರ್ಕ ಕೇಂದ್ರದ ಅಧಿಕಾರಿ ಟಿ.ಸಿ. ಚಂದ್ರು ಹೋಬಳಿಯಲ್ಲಿ ಬಿತ್ತನೆಗಾಗಿ 110 ಕ್ವಿಂಟಲ್ ಶೇಂಗಾ 4.5 ಕ್ವಿಂಟಲ್ ಹೆಸರು, ಎರಡು ಕ್ವಿಂಟಲ್ ಉದ್ದು, 4.5 ಕ್ವಿಂಟಲ್ ಅಲಸಂದೆ, 2 ಕ್ವಿಂಟಲ್ ತೊಗರಿ, 15 ಕ್ವಿಂಟಲ್ ಮೆಕ್ಕೆಜೋಳ, 20 ಕ್ವಿಂಟಲ್, ಸೂರ್ಯಕಾಂತಿ ವಿತರಿಸಿದ್ದು ಕಾರ್ಯ ಪ್ರಗತಿಯಲ್ಲಿದೆ.
ಪ್ರಯೋಜನಕಾರಿ: ಭೂ ಚೇತನ ಕಾರ್ಯಕ್ರಮದಡಿ ರೈತರಿಗೆ ಶೇ.50 ರಷ್ಟು ಸಬ್ಸಿಡಿ ದರದಲ್ಲಿ ಜಿಪ್ಸಂ, ಜಿಂಕ್, ಸಲ್ಪೇಟ್ ಹಾಗೂ ಬೋರಾನ್ ವಿತರಿಸಲಾಗಿದೆ. ಜಿಪ್ಸಂ ಹಾಕುವುದರಿಂದ ಎಣ್ಣೆ ಕಾಳು ಇಳುವರಿಯಲ್ಲಿ ಪ್ರಮುಖ ಪಾತ್ರ ವಹಿಸಿದರೆ ಜಿಂಕ್ ಸಲ್ಪೇಟ್, ಮೆಕ್ಕೆ ಜೋಳದ ಉತ್ತಮ ಪ್ರಯೋಜನಕಾರಿಯಾಗಿದೆ. ಬೋರಾನ್ ಎಲ್ಲ ಧಾನ್ಯಗಳ ಕಾಳು ಕಟ್ಟುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ ಎಂದರು.
ಬಿತ್ತನೆ ಗುರಿ: ಹೋಬಳಿಯಲ್ಲಿ ಈ ಭಾರಿ ಮುಂಗಾರು ಪೂರ್ವದಲ್ಲಿ ಮಳೆಯ ಕೊರತೆಯಿಂದ ಎಳ್ಳು ಮತ್ತು ಹೆಸರು ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಶೇಂಗಾ 300 ಎಕರೆ ಸೂರ್ಯಕಾಂತಿ 1 ಸಾವಿರ ಹೆಕ್ಟೇರ್ ಮತ್ತು ಮೆಕ್ಕೆ ಜೋಳ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಅಂದಾಜಿದೆ. ಹೆಸರು 100 ರಿಂದ 140 ಹೆಕ್ಟೇರ್ ಮತ್ತು ಎಳ್ಳು ಬೆಲೆಯನ್ನು 300 ರಿಂದ ನಾನೂರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿದೆ.
ರೈತರಿಗೆ ಸಂತಸ: ಆದರೆ ಬಿತ್ತನೆ ಕಡಿಮೆಯಾಗುವುದರಿಂದ ಈ ಪ್ರದೇಶದಲ್ಲಿ ಉತ್ತಮ ಬಿತ್ತನೆ ಆಗಬಹುದು. ಈ ಭಾರಿ ಬೀರೂರು ಹೋಬಳಿಗೆ ಬಿತ್ತನೆಗೆ ಯೋಗ್ಯವಾದ ಮಳೆ ಬಂದಿರುವುದು ರೈತರಿಗೆ ಸಂತಸ ತಂದಿದೆ ಎಂದರು.
ಕಳೆದ ಬಾರಿ ಹೆಸರು, ಉದ್ದು, ತೊಗರಿ ಬಿತ್ತನೆ ಬೀಜಗಳಿಗೆ ಕೆಜಿಗೆ 40ರು. ವರೆಗೆ ಸರ್ಕಾರ ಸಹಾಯಧನ ನೀಡಿತ್ತು. ಆದರೆ ಈ ಬಾರಿ ಕೇವಲ 20 ರು. ನೀಡಿದೆ. ಕೇಂದ್ರದಲ್ಲಿ ಸಾಕಷ್ಟು ಬೀಜದ ದಾಸ್ತಾನು ಇದ್ದು ರೈತರು ಇದರ ಉಪಯೋಗ ಪಡೆಯಬೇಕು ಎಂದರು.