ಸಾಮೂಹಿಕ ವಿವಾಹ ದುಂದು ವೆಚ್ಚಕೆ ಕಡಿವಾಣ
ಮೂಡಿಗೆರೆ: ಗಂಡ ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಅರಿತು ಹೊಸ ಬದುಕು ಸಾಗಿಸಿ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ತಿಳಿಸಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ 122ನೇ ಜನ್ಮ ದಿನಾಚರಣೆ, ಸರಳ ಸಾಮೂಹಿಕ ವಿವಾಹ ಹಾಗೂ ಮಲೆನಾಡ ಸಾಂಸ್ಕೃತಿಕ ಸಿರಿ-2013 ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ಮಾಡಿ ಮದುವೆ ಆಗಿ ನಂತರ ಸಂಕಷ್ಟದಲ್ಲಿ ಸಿಲುಕಿ ಕೊಳ್ಳುವ ಬದಲು ಸರಳವಾಗಿ ಮಂತ್ರ ಮಾಂಗಲ್ಯದಲ್ಲಿ ಮದುವೆಯಾಗುವುದರ ಮೂಲಕ ಉತ್ತಮ ಜೀವನ ನಡೆಸಿ ಎಂದರು.
ದುಂದು ವೆಚ್ಚಕ್ಕೆ ಕಡಿವಾಣ: ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ. ಪುಟ್ಟಯ್ಯ ಮಾತನಾಡಿ, ದೇಶದಲ್ಲಿ ದಲಿತರಿಗೆ ಸರಿಯಾಗಿ ಸ್ಥಾನ ಮಾನ ದೊರೆಯುತ್ತಿಲ್ಲ. ಅಂಬೇಡ್ಕರ್ ವಾಣಿಯಂತೆ ನಿಮ್ಮ ದಾಸ್ಯವನ್ನು ನೀವೇ ಕೊನೆ ಗಾಣಿಸಿ ಎಂದರು. ನಟಿ ಭಾವನ ಮಾತನಾಡಿ, ಸರಳ ಸಮೂಹಿಕ ವಿವಾಹಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವಂತೆ ಮನವಿಮಾಡಿದರು.
ಜಿಪಂ ಸದಸ್ಯೆ ಜ್ಯೋತಿ ಹೇಮಶೇಖರ್, ಎಂ.ಎಸ್. ಅನಂತ್, ತಾಪಂ ಸದಸ್ಯರಾದ ಸಬ್ಲೀದೇವರಾಜ್, ಸುಬ್ರಾಯಗೌಡ, ಸುಧಾ, ಪಪಂ ಸದಸ್ಯರಾದ ಕೆ. ವೆಂಕಟೇಶ್, ಪಾರ್ವತಮ್ಮ, ಸುಲೋಚನಾ, ಪಿ.ಆರ್. ವಿನಯ್ಕುಮಾರ್, ಕೋಮಲಮ್ಮ ಬೈರೇಗೌಡ, ಬಿ.ಎಸ್. ರಾಮಯ್ಯ, ಮಂಜಯ್ಯ ಇದ್ದರು.
ಮಂತ್ರ ಮಾಂಗಲ್ಯದ ಪೌರೋಹಿತ್ಯವನ್ನು ಸಾಗರ್ ಕೋಗಿಲೆ, ಸುಬ್ರಹ್ಮಣ್ಯ, ರಮೇಶ್, ತಿಮ್ಮಯ್ಯ, ಕುಮಾರಯ್ಯ ವಹಿಸಿದ್ದರು. 16 ಜೋಡಿಗಳು ಗ್ರಹಸ್ಥಾಶ್ರಮ ಸೇರಿದರು. ಮಲೆನಾಡು ಸಾಂಸ್ಕೃತಿಕ ಸಿರಿಯ ಅಂಗವಾಗಿ ಮಲೆನಾಡಿನ ವಿವಿಧ ತಂಡಗಳಿಂದ ಗೊರವ ಕುಣಿತ, ಸುಗ್ಗಿಕುಣಿತ, ಕೋಲಾಟ, ಚರ್ಮವಾದ್ಯ ಮೇಳ, ಜಾನಪದ ನೃತ್ಯ, ಸೋಬಾನೆ ಹಾಡು, ಗಾಡಿ ಪದ, ರಾಗಿ ಬೀಸೋ ಪದ, ನಟ್ಟಿಹಾಡು, ತಂಬೂರಿ ಪದಗಳು ಜನರ ಮನಸೋರೆಗೊಂಡವು.
ಕಾರ್ಯಕ್ರಮಕ್ಕೆ ಮುನ್ನ ನೂತನ ವಧು-ವರರನ್ನು ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಡೊಲ್ಲು ಕುಣಿತ, ಗೊರವ ಕುಣಿತಗಳೊಂದಿಗೆ ಮೆರವಣಿಗೆ ಮೂಲಕ ಅಡ್ಯಂತಾಯ ರಂಗಮಂದಿರಕ್ಕೆ ಕರೆತರಲಾಯಿತು. ನಂತರ ಅಂಬೇಡ್ಕರ್ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು.
--