ಆತ್ಮಶುದ್ಧೀಕರಣಕ್ಕಾಗಿ ಉರೂಸ್ ಆಚರಣೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 31
ಶಾಂತಿ ಪಡೆಯಲು ಮತ್ತು ಆತ್ಮಶುದ್ಧೀಕರಣಕ್ಕಾಗಿ ಉರೂಸ್ ಆಚರಿಸಲಾಗುವುದು ಎಂದು ಕರ್ನಾಟಕ ಸುನ್ನಿ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ತಲ್ಪಾಡಿ ಜಾಮಿಯಾ ಮಸ್ಜಿದ್ ಮೌಲಾನ ಅಬ್ದುಲ್ ರಶೀದ್ ನಿಸಖಾಫಿ ಹೇಳಿದ್ದಾರೆ.
ಖಾಂಡ್ಯ ಹೋಬಳಿ ಗೋರಿಗಂಡಿಯ ಹಜರತ್ ಖ್ವಾಜಾ ಅರಬುನ್ನಬಿ ದರ್ಗಾದ ಉರೂಸ್ ಅಂಗವಾಗಿ ಗುರುವಾರ ಸಂಜೆ ಆಯೋಜಿಸಿದ್ದ ಜ್ಹಿಕ್‌ರಸ್ವಲಾಮಜ್ಲಿಸ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಇಸ್ಲಾಂ ಎಂದರೆ ಶಾಂತಿ, ಜಗತ್ತಿನಲ್ಲಿರುವ ಎಲ್ಲರನ್ನೂ ಪ್ರೀತಿಸು ಎಂಬುದು ಇದರ ಆಶಯ ಎಂದರು.
ವಿಶೇಷವಾದ ಸ್ವೀಕೃತಿ: ಒಳ್ಳೆಯ ಕೆಲಸ ಮಾಡಿ ಅಲ್ಹಾನ ಪ್ರೀತಿಗೆ ಪಾತ್ರವಾದ ಮಹಾತ್ಮರ ಸಂಸ್ಮರಣೆ. ದರ್ಗಾದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವವರು ಜನರನ್ನು ಸದಾ ಒಗ್ಗೂಡಿಸಲು ಕಾರಣರಾಗುತ್ತಾರೆ ಹೊರತು, ವಿಘಟಿಸಲು ಎಂದೂ ಕಾರಣರಾಗುವುದಿಲ್ಲ. ಜಗತ್ತಿನಲ್ಲಿರುವ ಎಲ್ಲರನ್ನೂ ಪ್ರೀತಿ ಮಾಡಿದರೆ ಭೂಮಿಯಲ್ಲಿ ವಿಶೇಷವಾದ ಸ್ವೀಕೃತಿ ಇರುತ್ತದೆ. ದೇವರಿಗೆ ಪ್ರಿಯವಾದ ಚಿಹ್ನೆಗಳು ಗೌರವಕ್ಕೆ ಪಾತ್ರವಾಗುತ್ತದೆ. ಮಕ್ಕಾಕ್ಕೆ ಹಜ್ ಯಾತ್ರೆ ಮತ್ತು ಉಮ್ರಾಯಾತ್ರೆ ಕೈಗೊಳ್ಳುವವರು ಕಾಬಾದಲ್ಲಿರುವ ಒಂದು ಕಲ್ಲನ್ನು ಒಮ್ಮೆ ಚುಂಬಿಸಲು ಮುಗಿಬೀಳುವುದನ್ನು ಉದಾಹರಿಸಿದರು.
ಹೆಚ್ಚಿನ ಪುಣ್ಯ: ಮನಸ್ಸು ಮತ್ತು ಶರೀರವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಪ್ರಾರ್ಥನೆ ಸಹಕಾರಿ. ಕೊಲ್ಲು, ನಾಶಪಡಿಸುವ, ಹೊಡಿ-ಬಡಿ ಎನ್ನುವುದು ಎಂದೂ ಧರ್ಮವಾಗದು. ಸತ್ಸಂಗದಿಂದ ಹೆಚ್ಚಿನ ಪುಣ್ಯ ಸಿಗುತ್ತದೆ ಎಂದು ಇಸ್ಲಾಂನ ಮತಪ್ರಸಂಗಗಳನ್ನು ಕನ್ನಡದಲ್ಲಿ ವಿವರಿಸಿದರು.
ಮುಂಬಯಿ ಭೆಂಡಿಬಜಾರ್ ಮಸೀದಿಯ ಮೌಲಾನ ಮೊಹಮ್ಮದ್ ಸಯೀದುಜ್ ಜಮಾಂಖಾದ್ರಿ ಉರ್ದುವಿನಲ್ಲಿ ಮತ ಪ್ರಸಂಗಗಳನ್ನು ವಿವರಿಸಿದರು. ಮೂಡಿಗೆರೆ ಮಸೀದಿಯ ಮೌಲಾನ ಅಲ್ಹಾಜ್ ಅಕ್ಬರ್ ಅಲಿಕನ್ಸಾಬ್ ಹಜ್ಹವಿ ಅಧ್ಯಕ್ಷತೆ ವಹಿಸಿದ್ದರು. ಬಾಳೆಹೊನ್ನೂರು ಜಾಮಿಯಾ ಮಸೀದಿಯ ಮೌಲಾನ ಅಸದುಲ್ಲಾ ಹಜರತ್, ಖತೀಬ್ ಮೌಲಾನ ಅಶ್ರಫ್ ಅಲಿ ಮಾತನಾಡಿದರು.
ದರ್ಗಾ ಸಮಿತಿ ಅಧ್ಯಕ್ಷ ಎಸ್.ವೈ. ಮುಕ್ತಾರ್ ಅಹಮ್ಮದ್‌ರಜ್ವಿ, ಪದಾಧಿಕಾರಿಗಳಾದ ಎಂ. ಗೌಸ್, ಮೊಹಮ್ಮದ್ ಖಾಸಿಂ ಇದ್ದರು.
ಗುರುವಾರ ಸಂಜೆ ಜೇನುಗದ್ದೆ ಜುಮ್ಮಾ ಮಸೀದಿಯಿಂದ ಕಡಬಗೆರೆ ಮೊಹಿಯುದ್ದೀನ್ ಜುಮ್ಮ ಮಸೀದಿಯ ಮುಖಾಂತರ ಸಂದಲ್ ಮೆರವಣಿಗೆ ಗೋರಿಗಂಡಿ ದರ್ಗಾಕ್ಕೆ ದಫ್ ತಂಡದೊಂದಿಗೆ ತಲುಪಿತು. ಮುಸ್ಲಿಂ-ಹಿಂದೂ-ಕ್ರೈಸ್ತರೆನ್ನದೆ ರಾತ್ರಿ ಸಾವಿರಾರು ಭಕ್ತರು ದರ್ಗಾಕ್ಕೆ ಭೇಟಿ ನೀಡಿ ಹರಕೆ ಸಮರ್ಪಿಸಿದ್ದು ಎಲ್ಲರಿಗೂ ಸಸ್ಯಾಹಾರಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ರಾತ್ರಿ ಮಂಗಳೂರಿನ ಕಾವಲಕಟ್ಟೆಯ ಡಾ. ಮೊಹಮ್ಮದ್ ಪ್ಹಾಜ್ಹಿಲ್ ರಜ್ವಿ ಉಪನ್ಯಾಸ ಏರ್ಪಡಿಸಲಾಗಿತ್ತು.