ಇಂದು ಅಭಿನಂದನಾ ಕಾರ್ಯಕ್ರಮ
ನರಸಿಂಹರಾಜಪುರ: ಬ್ಲಾಕ್ ಕಾಂಗ್ರೆಸ್ನಿಂದ ಜೂನ್ 1 ರಂದು ಕೃಷಿಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಮತದಾರರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎ. ಅಬೂಬಕರ್ ತಿಳಿಸಿದ್ದಾರೆ. ಸಭೆಯಲ್ಲಿ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಟಿ.ಡಿ. ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಲ್.ಎಂ. ಮೂರ್ತಿ ಆಗಮಿಸಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನಾಳೆ ಪದಗ್ರಹಣ ಸಮಾರಂಭ
ಶೃಂಗೇರಿ: ಪಟ್ಟಣದ ಅದ್ವೈತ ಲ್ಯಾನ್ಸರ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಜೇಸೀರೇಟ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ನಡೆಯಲಿದೆ. ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಜೆಸಿಐ ಅಧ್ಯಕ್ಷ ತಲಗಾರು ನಾಗೇಶ್, ರೇವತಿ ಪೂವಯ್ಯ, ಪೂರ್ಣಿಮ ಕೆ.ಎಸ್. ಸುಮಾ ಸೋಮಶೇಖರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ನಾಳೆ ವಿಶೇಷ ಗ್ರಾಮ ಸಭೆ
ಶೃಂಗೇರಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ನೆಮ್ಮಾರು ಗ್ರಾಪಂ ವ್ಯಾಪ್ತಿಯ ವಿಶೇಷ ಗ್ರಾಮಸಭೆ ನಡೆಯಲಿದೆ. ಗ್ರಾಪಂ ಅಧ್ಯಕ್ಷೆ ಲಲಿತಾ ರಾಮಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಈ ಸಭೆಯಲ್ಲಿ ತಮ್ಮ ಗ್ರಾಮದ ಕುಂದುಕೊರತೆ, ಸಮಸ್ಯೆಗಳ ಕುರಿತ ಅಹವಾಲು ಸಲ್ಲಿಸಬಹುದಾಗಿದೆ.
ತಂಬಾಕು ನಿಷೇಧಿಸಲು ಕ್ಯಾಂಪ್ಕೋ ಆಗ್ರಹ
ಶಿವಮೊಗ್ಗ: ರಾಜ್ಯ ಸರ್ಕಾರ ಗುಟ್ಕಾ ನಿಷೇಧಕ್ಕಿಂತ ತಂಬಾಕು ನಿಷೇಧಿಸುವ ಬಗ್ಗೆ ಚಿಂತಿಸಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕುಂಕೋಡಿ ಪದ್ಮನಾಭ ಅವರು ಹೇಳಿದ್ದು, ಅತೀ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದಿದ್ದಾರೆ. ನಗರದಲ್ಲಿ ಅಡಕೆ ಮಾರುಕಟ್ಟೆಯ ವಿವಿಧ ಸಹಕಾರ ಸಂಸ್ಥೆಗಳ ಪ್ರಮುಖರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು, ಗುಟ್ಕಾ ನಿಷೇಧದಿಂದ ಈ ರಾಜ್ಯದ ಸುಮಾರು 2 ಕೋಟಿ ಜನರ ಮೇಲೆ ಆಗುವ ಆರ್ಥಿಕ ದುಷ್ಪರಿಣಾಮಗಳಿಗೆ ಸೂಕ್ತ ಮಾರ್ಗೋಪಾಯಗಳನ್ನು ಸರ್ಕಾರ ಕಂಡುಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರ ಬಾಂಗ್ಲಾ ಮತ್ತು ವಿವಿಧ ದೇಶಗಳಿಂದ ಆಮದು ಆಗುವ ಅಡಕೆಯನ್ನು ತಕ್ಷಣ ನಿಷೇಧಿಸಬೇಕು. ಈಗಾಗಲೇ ಆಮದಾಗಿರುವ ಅಡಕೆಯನ್ನು ಮುಟ್ಟುಗೋಲು ಹಾಕಿ ಸಿಎಫ್ಟಿಆರ್ಐನಲ್ಲಿ ಪರೀಕ್ಷಿಸಿ ಮಾರುಕಟ್ಟೆಗೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.