ಅರಣ್ಯ ಒತ್ತುವರಿ: ಜಿಲ್ಲೆಯಲ್ಲಿ 87 ಒತ್ತುವರಿದಾರರು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವವರನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ.
ಅರಣ್ಯ ಇಲಾಖೆ 30 ಎಕರೆ ಮೇಲ್ಪಟ್ಟು ಒತ್ತುವರಿ ಮಾಡಿರುವ 87 ಪ್ರಕರಣಗಳನ್ನು ಗುರುತಿಸಿದ್ದು, ಇದರಲ್ಲಿ 5,145.56 ಎಕರೆ ಅರಣ್ಯವನ್ನು ಒತ್ತುವರಿ ಮಾಡಿ ಕಾಫಿ ಬೆಳೆಯಲಾಗಿದೆ.
ಇದರಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಕಂಪನಿ ಎಸ್ಟೇಟ್‌ಗಳು ಸಹ ಸೇರಿಕೊಂಡಿವೆ. ಒತ್ತುವರಿ ತೆರವು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿರುವ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದವರಿಗೆ ಒತ್ತುವರಿ ತೆರವು ಮಾಡುವಂತೆ ಅರಣ್ಯ ಇಲಾಖೆ 64 (ಎ) ಪ್ರಕಾರ ನೋಟೀಸ್ ಜಾರಿ ಮಾಡಿದೆ. ನೊಟೀಸ್ ಕೈಗೆ ಸಿಕ್ಕರೂ ಕೂಡ ತೆರವು ಮಾಡದೆ ಇದ್ದರಿಂದ ಸ್ವತಃ ಅರಣ್ಯ ಇಲಾಖೆಯೇ ಒತ್ತುವರಿ ತೆರವುಗೊಳಿಸಿದ್ದು, ಚಿಕ್ಕಮಗಳೂರು ವಲಯದಲ್ಲಿ ಈವರೆಗೆ ನಾಲ್ಕು ಪ್ರಕರಣಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.
100 ಎಕರೆ ಮೇಲ್ಪಟ್ಟ ಒತ್ತುವರಿದಾರರು: 30 ಎಕರೆ ಮೇಲ್ಪಟ್ಟು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರನ್ನು ಅರಣ್ಯ ಇಲಾಖೆ ಗುರುತಿಸಿದೆ. ಈ ಪಟ್ಟಿಯಲ್ಲಿ ತಿಳಿಸಿರುವ ಪ್ರಕಾರ ಜಿ.ಆರ್. ಮಹೇಂದ್ರ ಎಂಬುವವರು 105 ಎಕರೆ ಒತ್ತುವರಿ ಮಾಡಿಕೊಂಡಿದ್ದರೆ, ಶಿರವಾಸೆಯ ರೆಬೆಲೋ ಅವರು 295, ಕೊಪ್ಪ ವಿಭಾಗದಲ್ಲಿ ಕ್ಲಾಸಿಕ್ ಪ್ಲಾಂಟೇಷನ್ 191.05, ದೇವದಾನದ ಎಸ್.ಪಿ. ಸುಬ್ರಾಯ 125, ಸಿ. ನಾರಾಯಣ 150, ತೋಟದೂರಿನ ಕಾಫಿ ಲ್ಯಾಂಡ್ ಲಿಮಿಟೆಡ್ 119, ಹೇರೂರಿನ ಮಲ್ಲಪ್ಪ ಹೆಗ್ಡೆ 124.15, ಟಿ. ಮಂಜಪ್ಪ 170 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನುಳಿದವರು 30 ರಿಂದ 99 ಎಕರೆ ಒಳಗೆ ಒತ್ತುವರಿಯನ್ನು ಮಾಡಿಕೊಂಡಿದ್ದಾರೆ.
ಕಂಪನಿ ಎಸ್ಟೇಟ್: ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿರುವವರಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
ಕೆಲವು ಬಡವರು ಜೀವನಕ್ಕಾಗಿ ಅಲ್ಪಸ್ವಲ್ಪ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು. ಇದು, ಬದುಕಿಗಾಗಿ ಮಾಡಿದ ಒತ್ತುವರಿ ಎಂದು ಮಾನವೀಯ ದೃಷ್ಟಿಯಿಂದ ನೋಡುವುದರಲ್ಲಿ ಅರ್ಥವಿದೆ. ಆದರೆ, ದೊಡ್ಡ ಬೆಳೆಗಾರರು ಮತ್ತು ಕಂಪನಿ ಎಸ್ಟೇಟ್‌ಗಳು ದೊಡ್ಡ ಮಟ್ಟದಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೆ.
ಇವರ್ಯಾರು ಬಡವರಲ್ಲ, ಅರಣ್ಯ ಭೂಮಿಯನ್ನು ಅನಾದಿಕಾಲದಿಂದಲೂ ಅನುಭವಿಸಿ, ಇಲ್ಲಿ ಕಾಫಿ, ಮೆಣಸು ಬೆಳೆದು ಪ್ರತಿ ವರ್ಷ ಕೋಟ್ಯಂತರ ರುಪಾಯಿ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಉಳಿಸಿಕೊಳ್ಳಲು ಹಲವು ಮಾರ್ಗದಲ್ಲಿ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. ಸಣ್ಣ ಬೆಳೆಗಾರರನ್ನು ಮುಂದಿಟ್ಟುಕೊಂಡು ಹಿಂಬಾಗಲಲ್ಲಿ ನಿಂತು ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ತೆರವು ತಡೆಗೆ ಪ್ರಯತ್ನ: ಹೈಕೋರ್ಟ್‌ನ ಸೂಚನೆಯ ಮೇರೆಗೆ ಅರಣ್ಯ ಇಲಾಖೆ ಒತ್ತುವರಿ ತೆರವುಗೊಳಿಸುತ್ತಿದೆ. ಮೊದಲ ಹಂತದಲ್ಲಿ 10 ಎಕರೆ ಮೇಲ್ಪಟ್ಟ ಒತ್ತುವರಿದಾರರನ್ನು ತೆರವುಗೊಳಿಸಲು ಇಲಾಖೆ ಮುಂದಾಗಿದ್ದು, ಕೆಲವೆಡೆ ಒತ್ತುವರಿಯನ್ನು ತೆರವುಗೊಳಿಸಿದೆ.
ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ, ತೆರವಿಗೆ ತಡೆ ಹಾಕುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಒತ್ತುವರಿ ತೆರವುಗೊಳಿಸಿದ್ದೆಯಾದರೆ ಆ ಭೂಮಿಯನ್ನು ನಂಬಿ ಜೀವನ ನಡೆಸುತ್ತಿರುವ ಸಣ್ಣ ಬೆಳೆಗಾರರಿಗೆ ನಿಜವಾಗಿಯೂ ತೊಂದರೆಯಾಗಲಿದೆ. ಆದರೆ, ಅವರ ಹೆಸರಿನಲ್ಲಿ ದೊಡ್ಡ ಬೆಳೆಗಾರರು ಅಕ್ರಮ ಭೂಮಿಯನ್ನು ಅನುಭವಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಒತ್ತುವರಿದಾರರಿಗೆ ಬೆಂಬಲ: ಅರಣ್ಯ ಒತ್ತುವರಿಯನ್ನು ತೆರವುಗೊಳಿಸಿದರೆ ಹೋರಾಟಕ್ಕೆ ಇಳಿಯುವುದಾಗಿ ಜನಪ್ರತಿನಿಧಿಗಳಷ್ಟೇ ಅಲ್ಲ, ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳು ಹೇಳುತ್ತಿರುವುದು, ದೊಡ್ಡ ಒತ್ತುವರಿದಾರರಿಗೆ ಬೆಂಬಲ ನೀಡಿದಂತಾಗಿದೆ. ಆದರೆ, ಹೈಕೋರ್ಟ್‌ನ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲೇಬೇಕಾದ ಅನಿವಾರ್ಯತೆ ಇರುವುದರಿಂದ ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ಒತ್ತುವರಿ ತೆರವಿಗೆ ನ್ಯಾಯಾಲಯ ಆದೇಶ
ಅರಣ್ಯ ಒತ್ತುವರಿದಾರರನ್ನು ತೆರವುಗೊಳಿಸಿ ವರದಿ ನೀಡುವಂತೆ ನ್ಯಾಯಾಲಯ ಹೇಳಿದೆ. ಅದರಂತೆ 10 ಎಕರೆ ಮೇಲ್ಪಟ್ಟ ಹಾಗೂ 30 ಎಕರೆ ಮೇಲ್ಪಟ್ಟ ಒತ್ತುವರಿದಾರರ ಎರಡು ಪಟ್ಟಿಯನ್ನು ಸಿದ್ದಪಡಿಸಿ, ಸಂಬಂಧಪಟ್ಟವರಿಗೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ಚಿಕ್ಕಮಗಳೂರು ಡಿಎಫ್‌ಓ ರವಿರಾಜ್ ನಾರಾಯಣ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಚಿಕ್ಕಮಗಳೂರು ವಿಭಾಗದಲ್ಲಿ ಈವರೆಗೆ ನಾಲ್ಕು ಕಡೆಗಳಲ್ಲಿ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಈ ಪ್ರಕ್ರಿಯೆ ಮುಂದುವರೆದಿದ್ದು, ತೆಗೆದುಕೊಂಡ ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ವರದಿಯನ್ನು ನೀಡಲಾಗುತ್ತಿದೆ. ಇದೇ ನವಂಬರ್ 18 ರಂದು ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವರದಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
-ಆರ್. ತಾರಾನಾಥ್