ಕನ್ನಡ ರಾಜ್ಯೋತ್ಸವಕ್ಕೆ ವಿವಿಧ ಸ್ಪರ್ಧೆ
ಬಾಳೆಹೊನ್ನೂರು: ಇಲ್ಲಿನ ಸಾಂಸ್ಕೃತಿಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ನ. 27 ರಂದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಂಗನವಾಡಿ, ಎಲ್ಕೆಜಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ, 1 ರಿಂದ 4ನೇ ತರಗತಿ ಮಕ್ಕಳಿಗೆ ಜನಪದ ಗೀತೆ ಹಾಡುವ ಸ್ಪರ್ಧೆ, 5 ರಿಂದ 7ನೇ ತರಗತಿ ಮಕ್ಕಳಿಗೆ ಕನ್ನಡ ನೃತ್ಯ ಸ್ಪರ್ಧೆ, 8 ರಿಂದ 10ನೇ ತರಗತಿ ಮಕ್ಕಳಿಗೆ ಏಕ ಪಾತ್ರಾಭಿನಯ ಸ್ಪರ್ಧೆ, ಪಿಯುಸಿ, ಐಟಿಐ, ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷಣ ಸ್ಪರ್ಧೆ, ಮಹಿಳೆಯರಿಗೆ ಪಾಸಿಂಗ್ ದ ಬಾಲ್, ಪುರುಷರಿಗೆ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸುವವರು ನ. 26ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ಮಹಮ್ಮದ್ ಆಲಿ (9845174698) ಸಂಪರ್ಕಿಸಬಹುದು.
ದತ್ತಿ ಉಪನ್ಯಾಸ
ಸಮೀಪದ ಮೇಗುಂದಾ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ. 12 ರಂದು ದಿ. ಎಚ್.ಎಸ್. ಸೀತಾರಾಮಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ವೀರಗಲ್ಲುಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ಡಾ. ಶಿವರಾಮ ಕಾರಂತರ ಕೃತಿಗಳಲ್ಲಿ ಗಾಢ ಸಂವೇದನೆಗಳು ವಿಷಯದ ಕುರಿತಾಗಿ ಎಚ್.ಎಂ. ಸುಬ್ಬಣ್ಣ ಉಪನ್ಯಾಸ ನೀಡಲಿದ್ದು, ಕಸಾಪ ಹೋಬಳಿ ಅಧ್ಯಕ್ಷ ಎಚ್.ವಿ. ಶಿವಾನಂದರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ತಾಲೂಕು ಅಧ್ಯಕ್ಷ ಗುಡ್ಡೇತೋಟ ನಟರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
'ಗುಣಾತ್ಮಕ ಶಿಕ್ಷಣ ನೀಡುವುದು ಕರ್ತವ್ಯ'
ತರೀಕೆರೆ: ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಮಾಜದ ಕರ್ತವ್ಯವಾಗಿದೆ ಎಂದು ಸಾಹುಕಾರ್ ಮಸೀದಿಯ ಉಸ್ತಾದ್ ಸಿದ್ದೀಖ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಎಂ.ಜಿ. ಹಾಲ್ನಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಎಸ್ಎಸ್ಎಫ್ ಪ್ರತಿಭೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಮೌಲ್ಯಗಳನ್ನು ನಿರ್ಮಾಣ ಮಾಡಲು ಒಳ್ಳೆಯ ಅಧ್ಯಯನ ಅಗತ್ಯವಿದೆ. ಸಮಾಜದ ಏಳಿಗೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಅಡಗಿದ್ದು, ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಅವರು ತಿಳಿಸಿದರು.
ಎಸ್ಎಸ್ಎಫ್ಸಿ ವಿಭಾಗೀಯ ಕಾರ್ಯದರ್ಶಿ ರಫೀಕ್ ಸಖಾಫಿ ಮಾತನಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಕಿವಿಮಾತು ಹೇಳಿದರು. ಎಸ್ಎಸ್ಎಫ್ನ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.