ಕುಡಿಯುವ ನೀರು ಯೋಜನೆ ಕುಂಠಿತ
ತರೀಕೆರೆ, ನ.10: ಕಳೆದ ಎರಡು ವರ್ಷಗಳಿಂದಲೂ ಆಮೆ ವೇಗದಲ್ಲಿ ಸಾಗುತ್ತಿರುವ ಹಲವು
ಕಾಮಗಾರಿ ಬಗ್ಗೆ ತಾಲೂಕಿನ ಜಿಪಂ ಇಂಜಿನಿಯರ್ಗಳು ಅನುಸರಿಸುತ್ತಿರುವ ವಿಳಂಬ ನೀತಿಯ ಬಗ್ಗೆ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಗರಂ ಆಗಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭಾನುವಾರ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ ಅವರು ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಅಸಮಾಧಾನಗೊಂಡರು.
ಭದ್ರಾ ನದಿಯಿಂದ ಸಮೀಪದ ಬೇಲೇನಹಳ್ಳಿ ಮತ್ತು ಇತರ 15 ಹಳ್ಳಿಗಳು, ಅಮೃತಾಪುರ ಮತ್ತು ಅಜ್ಜಂಪುರ ಹಾಗೂ ಸುತ್ತಾಮುತ್ತ ಹಳ್ಳಿಗಳ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ಹಾಗೂ ಮುಂದುವರಿದ ಕಾಮಗಾರಿಗಳ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.
ರಜೆ ಹೋದ ಅಧಿಕಾರಿಗಳು: ತಾವು ಕಚೇರಿಗೆ ಭೇಟಿ ನೀಡುವ ವಿಚಾರ ಈ ಮೊದಲೇ ಗೊತ್ತಿದ್ದರೂ, ನಾಲ್ಕು ಜನ ಅಧಿಕಾರಿಗಳಿಗೆ ಒಮ್ಮೆಗೇ ಒಂದೇ ದಿನ ರಜೆ ನೀಡಿರುವುದಕ್ಕೂ ರೇಖಾ ಅಸಮಾಧಾನ ವ್ಯಕ್ತಪಡಿಸಿದರು. ಹಾಜರಿ ಪುಸ್ತಕದಲ್ಲಿ ಆತುರದಲ್ಲಿ ಅವರಿಗೆ ರಜೆ (ಸಿ.ಎಲ್) ನೀಡಿರುವುದರ ಔಚಿತ್ಯ ಏನಿತ್ತು ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಪಿ.ಎಚ್.ಇ.ಎ.ಇ.ಇ. ಅವರನ್ನು ಪ್ರಶ್ನಿಸಿದರು.
ಜೀರೋ ಪ್ರೋಗ್ರೆಸ್: ಕುಡಿಯುವ ನೀರಿನ ಯೋಜನೆಗಳ ಕುರಿತು ದಾಖಲಾತಿಗಳನ್ನು ಗಂಟೆಗಟ್ಟಲೇ ಪರಿಶೀಲಿಸಿ, ಎಷ್ಟು ಕಾಮಗಾರಿ ಆಗಿದೆ, ಎಷ್ಟು ಹಣ ಖರ್ಚಾಗಿದೆ ಎಂದು ಅಧಿಕಾರಿಗಳನ್ನು ವಿಚಾರಿಸಿದ ಅಧ್ಯಕ್ಷರು, ಸರ್ಕಾರ ನಿಮಗೆ ಅಧಿಕಾರ ಕೊಟ್ಟಿದ್ದರೂ, ಅದನ್ನು ನೀವು ಸರಿಯಾಗಿ ಉಪಯೋಗಿಸುತ್ತಿಲ್ಲ. ಕುಡಿಯುವ ನೀರು ಸರಬರಾಜು ಕಾರ್ಯಗಳಲ್ಲಿ ಇಡೀ ಜಿಲ್ಲೆಯಲ್ಲಿ ತರೀಕೆರೆ ತಾಲೂಕಿನದೇ ಸ್ವಲ್ಪವೂ ಅಭಿವೃದ್ಧಿ ಇಲ್ಲ. ಯೋಜನೆಗಳ ಪ್ರಗತಿ ಶೂನ್ಯ (ಜೀರೋ ಪ್ರೋಗ್ರೆಸ್) ಎಂದರು. ಅಲ್ಲದೇ, ಯೋಜನೆ ಪ್ರಗತಿ ಬಗ್ಗೆ ಮಾತನಾಡಲು ಅಧಿಕಾರಿಗಳಿಗೆ ಕರೆ ಮಾಡಿದರೆ, ಅವರ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇದಕ್ಕೆ ಕಾರಣವೇನು ಎಂದು ಅವರು ಪ್ರಶ್ನಿಸಿದರು. ಅಲ್ಲದೇ, ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ವಿವರಣೆ: ಜಿ.ಪಂ.ಎ.ಇ.ಇ. ಅವರು ಬೇಲೇನಹಳ್ಳಿ ಮತ್ತು ಇತರ 15 ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕಾರ್ಯದಲ್ಲಿ ಕೆಇಬಿ ಲೈನ್ ಆಗಿದೆ. ರೇಲ್ವೆ ಕೆಲಸ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.
ಇದೇ ವೇಳೆ ಜಿಪಂ ಇಂಜಿನಿಯರಿಂಗ್ ಕಚೇರಿಗೆ ಬಂದರೆ ಅಧಿಕಾರಿಗಳು ಒಬ್ಬರೂ ಇರುವುದಿಲ್ಲ ಎಂದು ಸಾರ್ವಜನಿಕರು ದೂರಿದರು.
ಜಿಪಂ ಸದಸ್ಯ ಕೆ.ಆರ್. ಆನಂದಪ್ಪ ಅವರು ಮಾತನಾಡಿ, ಯೋಜನೆಯನ್ನು ಆದಷ್ಟು ಬೇಗ ಮುಗಿಸಿ ಬರ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸದಸ್ಯರಾದ ಎಸ್.ಬಿ. ಆನಂದಪ್ಪ, ಕೃಷ್ಣಮೂರ್ತಿ, ಕೆ.ಪಿ. ಕುಮಾರ್, ಹೇಮಾವತಿ ಕೃಷ್ಣಪ್ಪ, ಸುಧಾ ಅಮೃತೇಶ್ ತಾ.ಪಂ. ಮಾಜಿ ಸದಸ್ಯ ಎಸ್.ಎ. ಕೃಷ್ಣಪ್ಪ, ಪುರಸಭೆ ಮಾಜಿ ಸದಸ್ಯ ಟಿ.ಕೆ. ಪ್ರಕಾಶ್, ತಿಪ್ಪೇಶ್, ಜಿಪಂ ಪ್ರಭಾರಿ ಮುಖ್ಯ ಕಾರ್ಯದರ್ಶಿ ವಿಠಲ್ ಮತ್ತಿತರರು ಹಾಜರಿದ್ದರು.