ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೈತಿಕತೆ ಜೀವನಾನುಭವ ಕಲಿಸುತ್ತದೆ

Lingaraj Badiger
Updated On : 11 Nov 2013, 10:48 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ನ.10
ನೈತಿಕತೆ, ಪ್ರಾಮಾಣಿಕತೆ, ತಿಳುವಳಿಕೆ ಹಾಗೂ ಜೀವನಾನುಭವ ಆತ್ಮವಿಶ್ವಾಸವನ್ನು ಕಲಿಸುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ನರಹಳ್ಳಿ ಬಾಲಸುಬ್ರಮಣ್ಯ ಹೇಳಿದ್ದಾರೆ.
ನಗರದ ಯುರೇಕಾ ಅಕಾಡೆಮಿಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಮಾತು- ಕತೆ ವಿಶಿಷ್ಟ್ಯ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಪರಿಸರದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಕೊಡದ ಸ್ಥಿತಿ ಇದೆ. ಮಕ್ಕಳಿಂದು ಬಹಷ್ಟು ಸೂಕ್ಷ್ಮ ಮನಸ್ಥಿತಿಯವರಾಗಿ ಬದುಕು ಎದುರಿಸಲಾಗದ ಹಂತವನ್ನೂ ತಲುಪಿದ್ದಾರೆ. ಸಣ್ಣ ಕಾರಣಕ್ಕೂ ಜೀವಹಾನಿ ಸಾಮಾನ್ಯವಾಗಿದೆ ಎಂದರು.
ಅವಮಾನವೂ ಒಂದು ಪಾಠ: ಮಕ್ಕಳಿಗೆ ಕೆಲ ಜವಾಬ್ಧಾರಿಯನ್ನು ಆಯಾಯ ನೆಲೆಗೆ ತಕ್ಕಂತೆ ವಹಿಸಬೇಕು. ಕೆಲ ಅನುಭವ ತಾವೇ ಪಡೆಯುವಂತಹ ವಾತಾವರಣ ಮಕ್ಕಳಿಗೆ ಸೃಷ್ಟಿಯಾಗಬೇಕು. ಅವಮಾನವೂ ಪಾಠ ಕಲಿಸುತ್ತದೆ. ಪ್ರೀತಿಯಿಂದ ತಿಳುವಳಿಕೆ ಹೇಳಬೇಕು.  ಸದಾ ಸ್ಪರ್ಧೆಯ ಮುಂಚೂಣಿಯಲ್ಲಿರಬೇಕೆಂಬುದರಿಂದ ಮಕ್ಕಳನ್ನು ದೂರವಿಡಿ. ಪ್ರತಿಭೆಯ ರೂಪ ಅಂಕವಷ್ಟೇ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಶೋಭಾಯಕರವಾಗಿ ಮಾಡುವುದೇ ನಿಜವಾದ ಕಲೆ ಎಂದ ಅವರು, ತಂದೆ ತಾಯಿಗಳಿಂದ ಮಕ್ಕಳಿಗೆ ಸಹಜ ಪ್ರೀತಿ ಸಿಗದಿರುವುದರಿಂದ ಅವರು ಬೇರೆಕಡೆ ಪ್ರೀತಿ ಹುಡುಕುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಟಿ.ವಿ., ಮೊಬೈಲ್ ಸೇರಿದಂತೆ ಅನೇಕ ಉಪಕರಣಗಳಿಂದ ಸಾಕಷ್ಟು ಹಾನಿಯೂ ಇದೆ.  ವೈಯುಕ್ತಿಕ ಸ್ವಾತಂತ್ರ್ಯವನ್ನು ಇವು ಕಸಿದುಕೊಳ್ಳುತ್ತವೆ ಎಂಬ ಪ್ರಜ್ಞೆಯೂ ನಮಗಿಲ್ಲ.  ಇವುಗಳಿಲ್ಲದೆ ಬದುಕು ಸುಖಮಯ ಮಾಡಿಕೊಳ್ಳಬಹುದು ಎಂದು ಹೇಳಿದರು.   
ಸಂತೋಷ ಖರೀದಿಸಲಾಗದು: 20 ನೇ ಶತಮಾನದ ಪ್ರಕ್ರಿಯೆ ನಗರೀಕರಣ. ಹಳ್ಳಿಗಳ ದೇಶ ಭಾರತವಾದರೂ ತಂತ್ರಜ್ಞಾನದ ಬೆಳವಣಿಗೆ, ಕೈಗಾರಿಕೀಕರಣದಿಂದ ನಗರಕ್ಕೆ ವಲಸೆ ಸಹಜವಾಗಿದೆ. ಸುಖದ ಬೆನ್ನು ಹತ್ತುವುದು ಆಧುನಿಕ ಬದುಕಿನ ಕ್ರಮ. ಸುಖ ನಗರದಲ್ಲಿ ಸಿಗುತ್ತದೆ ಎಂಬ ಭಾವ ನಮ್ಮದಾಗಿದೆ. ಸುಖ ದೇಹಕ್ಕೆ ಸಂಬಂಧಪಟ್ಟದಾಗಿದ್ದು ಇದನ್ನು ಕೊಳ್ಳಬಹುದು.  ಆದರೆ, ಮನಸ್ಸಿಗೆ ಸಂಬಂಧಿಸಿದ ಸಂತೋಷವನ್ನು ಖರೀದಿಸಲಾಗದು, ಅದೊಂದು ಭಾವ ಎಂದರು.
ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಇಂದು ಕಡಿಮೆಯಾಗುತ್ತಿದೆ. ಹಿಂದಿನ ಗುರುಕುಲ ಪದ್ಧತಿ, ಪಾಶ್ಚಾತ್ಯ ಶಿಕ್ಷಣದಲ್ಲಿ ಈಗಿಲ್ಲ, ಗುರುಗಳೇ ಅನೇಕ ದಿನ ತಡಕಾಡಿದ ಸಂದರ್ಭ ನಮಗೆ ಗೊತ್ತಿದೆ. ವಿದ್ಯಾರ್ಥಿ ಪ್ರತಿಭಾವಂತನಾಗಿದ್ದರೆ ಶಿಕ್ಷಕರೂ ಚುರುಕಾಗಿರುತ್ತಾರೆ. ಉತ್ತರ ಹೇಳವುದಷ್ಟೇ ಅಲ್ಲ, ಗಂಭೀರ ಪ್ರಶ್ನೆ ಕೇಳುವುದೂ ಮುಖ್ಯ. ಪ್ರಶ್ನೆ ಚಿಂತನೆಗೆ ಹಚ್ಚುವಂತಿರಬೇಕು. ಗೌರವ, ಜವಾಬ್ದಾರಿ, ತಿಳಿದುಕೊಳ್ಳುವ ಕುತೂಹಲ ಪ್ರಶ್ನಿಸುವವರಿಗಿದ್ದರೆ ಪರಸ್ಪರ ಅರಿವಿನ ಹರವು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ತಾಳ್ಮೆ ಬಹುದೊಡ್ಡ ಮೌಲ್ಯ: ಜೀವನದಲ್ಲಿ ಬಹುದೊಡ್ಡ ಮೌಲ್ಯವೆಂದರೆ ತಾಳ್ಮೆ. ತಾಳ್ಮೆಯಿಂದ ಅನೇಕ ಸಮಸ್ಯೆಗಳು ತನ್ನಷ್ಟಕ್ಕೆ ಪರಿಹಾರವಾಗುತ್ತವೆ. ಸಂಬಂಧಗಳು ಸುಧಾರಿಸುತ್ತವೆ. ಕಳೆದುಕೊಂಡವರನ್ನು ಮರಳಿ ಪಡೆಯುತ್ತೇವೆ. ಕಥೆಗಳ ಮೂಲಕ ಮೌಲ್ಯವನ್ನು ಪೋಷಕರು ಹಾಗೂ ಗುರುಗಳು ಪ್ರೀತಿಯಿಂದ ಪಾಠ ಹೇಳಿದರೆ ಸಮಾಜ ಪರಿವರ್ತನೆಯಾಗಲು ಸಾಧ್ಯ.  ಬುದ್ಧಿ, ಹಣ ಮಾತ್ರ ನಮ್ಮೆಲ್ಲ ಅಗತ್ಯ ಪೂರೈಸುವುದಿಲ್ಲ. ಅದ್ದೆಲ್ಲಕ್ಕಿಂತ ಮೀರಿದ ಭಾವ, ಪ್ರೀತಿಬೇಕು. ಆದರೆ, ಇಂದು ಸಮಾಜವೆ ಪ್ರೀತಿಸುವ ಶಕ್ತಿ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಆಶಾಕಿರಣದ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೀತಿಯ ಹೂ ಅರಳಲು ಋತುವಿನ ಅಗತ್ಯವಿಲ್ಲ.  ಪರಸ್ಪರ ಪ್ರೀತಿ ವಿಶ್ವಾಸದ ಬದುಕಿಗೆ ಸಾಹಿತ್ಯ, ಸಂಸ್ಕೃತಿ, ಕಲೆ ಪೂರಕ ಎಂದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಿ.ಎಚ್. ನಟರಾಜ್ ಸಮಾರಂಭ ಉದ್ಘಾಟಿಸಿದರು. ನರಹಳ್ಳಿ ಬಾಲಸುಬ್ರಮಣ್ಯ, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ವೇದಿಕೆಯಲ್ಲಿದ್ದರು. ಸಾಹಿತಿ ಬೆಳವಾಡಿ ಮಂಜುನಾಥ್ ಸ್ವಾಗತಿಸಿದರು, ಯುರೇಕಾ ಅಕಾಡೆಮಿ ಅಧ್ಯಕ್ಷ ದೀಪಕ್ ದೊಡ್ಡಯ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement