ಪ್ಯಾಕೇಜ್ ಅನುಷ್ಠಾನಕ್ಕೆ ನೋಡಲ್ ಅಧಿಕಾರಿ ನೇಮಿಸಿ
ಬಾಳೆಹೊನ್ನೂರು: ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಗಾಗಿ ಬಿಡುಗಡೆಗೊಂಡ ಪ್ಯಾಕೇಜ್ ಅನುಷ್ಟಾನಗೊಳಿಸಲು ಐಎಎಸ್ ಅಥವಾ ಕೆಎಎಸ್ ಮಟ್ಟದ ಹಿರಿಯ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕೆಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ಸಂಚಾಲಕಿ ಸುಮಾ ನಾಗೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಭಿವೃದ್ಧಿಗಾಗಿ ಕೋಟ್ಯಂತರ ರು. ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಇದಕ್ಕೆ ಸಾಕ್ಷಿಯಾಗಿದೆ. ಕಳೆದ ತಿಂಗಳು ಸರ್ಕಾರದ ಒಳಾಡಳಿತದ ಹೆಚ್ಚುವರಿ ಕಾರ್ಯದರ್ಶಿ ಸುಷ್ಮಾ ಗೋಡಬೊಲೆ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಸ್ಥಳೀಯ ಗ್ರಾ.ಪಂ, ತಾ.ಪಂ, ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ, ನಿರ್ಮಿತಿ ಕೇಂದ್ರ, ಮೆಸ್ಕಾಂ ಹಾಗೂ ಭೂ ಸೇನಾ ನಿಗಮದ ಕಾರ್ಯವೈಖರಿ ಬಹಿರಂಗಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿಗೆ ಆದ್ಯತೆ ನೀಡಿ: ಸರ್ಕಾರ ನಕ್ಸಲ್ ಹೆಸರಿನಲ್ಲಿ ಅಭಿವೃದ್ಧಿ ಅನುದಾನ ಬಿಡುಗಡೆಗೊಳಿಸುತ್ತಿರುವುದು ಕಳ್ಳರ ಕೈಯಲ್ಲಿ ಗಂಟು ಕೊಟ್ಟಂತಾಗಿದೆ. ಪ್ರಸ್ತುತ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡಿ ಅನುಭವವಿರುವ ಈಗಿನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಒಂದಾಗಿ ಈ ಹಿಂದೆ ಮಧುಕರ ಶೆಟ್ಟಿ ಮತ್ತು ಹರ್ಷಗುಪ್ತ ಮಾಡಿದಂತಹ ಕಾರ್ಯ ಮುಂದುವರೆಸಲಿ, ಮಧುಕರಶೆಟ್ಟಿ ತಯಾರಿಸಿದ ಸಮಗ್ರ ವರದಿ ಸರ್ಕಾರದ ಕಡತದಲ್ಲಿ ಸೇರಿರುವುದನ್ನು ಹೊರತೆಗೆದು ಅಭಿವೃದ್ಧಿ ಕಾರ್ಯಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಇಚ್ಛಾಶಕ್ತಿ ಕೊರತೆ: ತಾಲೂಕು ಮಟ್ಟದ ರಾಜಕೀಯ ಪಕ್ಷಗಳ ದೃಷ್ಟಿಕೋನ ಮೀರಿ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೆ ಖಂಡಿತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಲಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸದೇ ಇರುವುದೇ ಈ ಹಿಂದಿನ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಕಳಪೆ ಕಾಮಗಾರಿ ಎಂಬ ಹಗಲು ದರೋಡೆಯಿಂದ ಪ್ರಾಮಾಣಿಕತೆ ಎಂಬುದು ಗಗನ ಕುಸುಮವಾಗಿಯೇ ಉಳಿದಿದೆ. ಇತ್ತೀಚಿನ ಪತ್ರಿಕಾ ವರದಿಗಳು ನಕ್ಸಲ್ ಪೀಡಿತ ಪ್ರದೇಶದ ಬಹುಸಂಖ್ಯಾತ ನೊಂದ ಬಡ ಜನರನ್ನು ಭ್ರಮನಿರಸನಗೊಳಿಸಿರುವುದು ಕಟು ಸತ್ಯವಾಗಿದೆ ಎಂದು ತಿಳಿಸಿದ್ದಾರೆ.