22ರಿಂದ ಡೆಂಟಲ್ ಅಸೋಸಿಯೇಷನ್ ಸಮ್ಮೇಳನ: ಡಾ. ಎಂ.ಜಿ. ಭಟ್
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ನ.11
ಇಂಡಿಯನ್ ಡೆಂಟಲ್ ಅಸೋಸಿಯೇಷನ್ 41ನೇಯ ಕರ್ನಾಟಕ ರಾಜ್ಯ ಸಮ್ಮೇಳನ ಮಡಿಕೇರಿಯಲ್ಲಿ ನವೆಂಬರ್ 22 ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಡಾ. ಎಂ.ಜಿ. ಭಟ್ ಹೇಳಿದ್ದಾರೆ.
ನಗರದ ದಿ ಗೇಟ್ವೇ ಹೋಟೇಲ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಐಡಿಎ ಚಿಕ್ಕಮಗಳೂರು ಘಟಕದ ಅಧ್ಯಕ್ಷ ಡಾ. ಎಂ.ಜೆ. ಭರತ್ ತಂಡದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ರಾಷ್ಟ್ರೀಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ ಡೊಬ್ಳೆ ಸಮ್ಮೇಳನ ಉದ್ಘಾಟಿಸಲಿದ್ದು, ದಂತ ಚಿಕಿತ್ಸೆಯ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಚರ್ಚೆ ಸಮಾಲೋಚನೆ ನಡೆಯಲಿದೆ. ದಂತಚಿಕಿತ್ಸೆಗೆ ಸಂಬಂಧಪಟ್ಟ ಆತ್ಯಾಧುನಿಕ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ಪಡೆಯುವ ಅವಕಾಶವಿದೆ ಎಂದರು.
30 ಸಾವಿರ ಸದಸ್ಯತ್ವ: ದಂತ ವೈದ್ಯರನ್ನೊಳಗೊಂಡ ಐಡಿಎ 1946 ರಲ್ಲಿ ಕಲ್ಕತ್ತಾದ ಡಾ. ಆರ್. ಅಹಮ್ಮದ್ ಪ್ರಯತ್ನದಿಂದಾಗಿ ಪ್ರಾರಂಭಗೊಂಡಿದ್ದು, ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ 28 ಶಾಖೆಗಳು ಸೇರಿದಂತೆ ಒಟ್ಟು 208 ಘಟಕಗಳಲ್ಲಿ ರಾಜ್ಯದ 5 ಸಾವಿರ ದಂತ ವೈದ್ಯರೂ ಸೇರಿದಂತೆ ಸುಮಾರು 30 ಸಾವಿರ ಸದಸ್ಯತ್ವ ಹೊಂದಿದೆ. ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಂತ ವೈದ್ಯರ ಸಂಘಟನೆ ಮೊದಲು ಆರಂಭಗೊಂಡಿತ್ತೆಂದ ಅವರು, ನಿರಂತರವಾಗಿ ಶಾಲಾ ಕಾಲೇಜುಗಳ ಮೂಲಕ ದಂತ ಸುಸ್ಥಿರತೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ಹೇಳಿದರು.
ಗುಟ್ಕಾ ನಿಷೇಧಕ್ಕೆ ಒತ್ತಾಯ: ಐಡಿಎ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದ್ದು, ಆರೋಗ್ಯದ ಮೂಲಕ ರಾಷ್ಟ್ರೀಯ ಸ್ವಾಸ್ಥ್ಯವನ್ನು ಕಾಪಾಡುವ ಬದ್ಧತೆ ಹೊಂದಿದೆ. ದಂತಕ್ಷಯ, ಕ್ಯಾನ್ಸರ್ ಸೇರಿದಂತೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಗುಟ್ಕಾ ನಿಷೇಧಿಸುವಂತೆ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದನ್ನು ನೆನಪಿಸಿದ ಅವರು, ಈ ನಿಟ್ಟಿನಲ್ಲಿ ಪ್ರಸ್ತುತ ಆರೋಗ್ಯ ಸಚಿವ ಯು.ಟಿ. ಖಾದರ್ ಸಹಕಾರವನ್ನು ಸ್ಮರಿಸಿದರು. ಎರಡು ವರ್ಷಗಳ ಹಿಂದೆ ದಂತ ವೈದ್ಯ ಡಾ. ಬಿ.ಎಂ.ಎ. ಖಾದರ್ ಪರಿಶ್ರಮದಿಂದ ಪ್ರಾರಂಭಗೊಂಡ ಚಿಕ್ಕಮಗಳೂರು ಘಟಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ಡಾ. ಭರತ್ ನೇತೃತ್ವದ ನೂತನ ತಂಡವು ಉಪಯುಕ್ತ ಚಟುವಟಿಕೆಗಳನ್ನು ನಡೆಸಲೆಂದು ಹಾರೈಸಿದರು.
ಐಎಂಎ ಘಟಕ ಅಧ್ಯಕ್ಷ ಡಾ. ಪ್ಯಾಟ್ರಿಕ್ ಮಾತನಾಡಿ, ವೃತ್ತಿಪರ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಅನೇಕ ಹೊಸ ಚಿಕಿತ್ಸಾ ಪದ್ಧತೆಯನ್ನು ಪರಿಚಯಿಸಿಕೊಳ್ಳುವುದರ ಜೊತೆಗೆ ಸಿಡಿಇ ಪಾಯಿಂಟ್ಅನ್ನು ಪಡೆಯಬಹುದು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ವೃತ್ತಿ ಮುಂದುವರೆಸಲು ವೈದ್ಯರು ಅಧಿಕೃತ ಪರವಾನಗಿ ಪಡೆಯಲು ಕನಿಷ್ಟ 30 ಸಿಡಿಇ ಪಾಯಿಂಟ್ ಪಡೆಯುವುದು 2013 ರ ಸೆಪ್ಟಂಬರ್ನಿಂದ ಅನಿವಾರ್ಯವಾಗಲಿದೆ ಎಂದರು.
ಐಎಂಎ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ್, ನಿರ್ಗಮಿತ ಅಧ್ಯಕ್ಷ ಡಾ. ಬಿ.ಎಂ.ಎ. ಖಾದರ್, ನೂತನ ಅಧ್ಯಕ್ಷ ಡಾ. ಎಂ.ಜೆ. ಭರತ್, ಶಿವಮೊಗ್ಗ ಐಡಿಎ ಪರವಾಗಿ ಡಾ. ಆದರ್ಶ ಮತ್ತು ಡಾ. ವಿವೇಕ್ ಮಾತನಾಡಿದರು. ಡಾ. ಶರತ್ ಮತ್ತು ಡಾ. ರಾಜೇಶ್ ಹೆಗ್ಡೆ, ಖಜಾಂಚಿ ಡಾ. ನವೀನ್ ಪ್ರಭು, ಡಾ. ಬಿ.ಎ. ಮೆಹಪೂಸ್, ಡಾ. ವಿಮಲ್ ಜೈನ್, ಡಾ. ಸನ್ಮಾನ್, ಡಾ. ಶುಭ ಉಜ್ವಲ್ ಹಾಗೂ ಡಾ. ಸುನೀತಾ ಚಂದ್ರಶೇಖರ್ ಉಪಸ್ಥಿತರಿದ್ದರು.