ಅಕ್ರಮ ಮರಳು ಸಾಗಣೆ: ನಾಲ್ಕು ಟ್ರ್ಯಾಕ್ಟರ್ ವಶ
ಕಡೂರು: ಕಡೂರು ತಾಲೂಕು ಯಗಟಿ ಹೋಬಳಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ನಾಲ್ಕು ಟ್ರಾಕ್ಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯಗಟಿ ಪೊಲೀಸ್ ಠಾಣೆ ಎಸ್ಐ ಆರಿಫ್ ಮಶಾಪುರಿ ತಿಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕಳೆದ ರಾತ್ರಿ ಸಬ್ ಇನ್ಸ್ಪೆಕ್ಟರ್ ಆರಿಫ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಯಗಟಿ ಸಮೀಪದ ಚೌಳಹಿರಿಯೂರು ಬಳಿ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಟ್ರಾಕ್ಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಟ್ರಾಕ್ಟರನ್ನು ಭೈರಗೊಂಡನಹಳ್ಳಿ ಸಮೀಪ ವಶಪಡಿಸಿಕೊಳ್ಳಲಾಗಿದೆ.
ಚೌಳಹಿರಿಯೂರಿನ ಸೋಮು, ಜಗನ್ನಾಥ್, ಅನಿಲ್ ಹಾಗೂ ಬೈರಗೊಂಡನ ಹಳ್ಳಿಯ ಮಲ್ಲೇಶ್ ಎಂಬುವರಿಗೆ ಸೇರಿದಂತೆ ನಾಲ್ಕು ಮರಳು ಟ್ರಾಕ್ಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಚಾಲಕರು ನಾಪತ್ತೆಯಾಗಿದ್ದು ಈ ಬಗ್ಗೆ ತಾಲೂಕು ದಂಡಾಧಿಕಾರಿಗಳಿಗೆ ವರದಿ ನೀಡಿ ಕ್ರಮ ಕೈಗೊಳ್ಳುವಂತೆ ನಿವೇದಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಮುಖ್ಯಪೇದೆ ರವಿಕುಮಾರ್ ಹಾಗೂ ಸಿಬ್ಬಂದಿಗಳಾದ ಹರೀಶ್, ಮಂಜಾನಾಯ್ಕ, ನಿಂಗಾನಾಯ್ಕ, ರಂಗಸ್ವಾಮಿ ಮತ್ತು ಮಲ್ಲಿಕಾರ್ಜುನ್ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.