ಅಡಕೆ ಬೆಳೆಗಾರರಿಗೆ ಪರಿಹಾರಕ್ಕೆ ಮನವಿ
ಸಾಗರ: ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಸೋಮವಾರ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಅಡಕೆ ಬೆಳೆಗಾರರಿಗೆ ತಕ್ಷಣ ಪರಿಹಾರ ವಿತರಿಸುವಂತೆ ಮನವಿ ಮಾಡಿದರು.
ತಾಲೂಕಿನಲ್ಲಿ ಈತನಕ ಅತಿವೃಷ್ಟಿಯಿಂದಾಗಿ ಕೊಳೆರೋಗಕ್ಕೆ ತುತ್ತಾಗಿ ಅಡಕೆ ಫಸಲನ್ನು ಕಳೆದುಕೊಂಡ ಬೆಳೆಗಾರರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಇದರಿಂದ ಬೆಳೆಗಾರರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಬೆಳೆಗಾರರಿಗೆ ಗ್ರಾಮಲೆಕ್ಕಿಗರು ಪರಿಹಾರಧನದ ಚೆಕ್ಕನ್ನು ನೀಡಿಲ್ಲ. ಆವಿನಹಳ್ಳಿ, ಕಲ್ಮನೆ, ಭೀಮನಕೋಣೆ, ಕರೂರು ಭಾರಂಗಿ ಹೋಬಳಿಯ ಅನೇಕ ಗ್ರಾಮಗಳಲ್ಲಿ ಬೆಳೆಗಾರರು ಪರಿಹಾರಧನಕ್ಕೆ ಕಾಯುತ್ತಿದ್ದಾರೆ. ತಕ್ಷಣ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ. ಉದಯಕುಮಾರ್ ಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಶೇ.75ರಷ್ಟು ಬೆಳೆಗಾರರಿಗೆ ಪರಿಹಾರಧನದ ಚೆಕ್ಕನ್ನು ವಿತರಣೆ ಮಾಡಲಾಗಿದೆ. ಇನ್ನು ಶೇ.25ರಷ್ಟು ರೈತರಿಗೆ ಮಾತ್ರ ಪರಿಹಾರದ ಚೆಕ್ಕು ನೀಡುವುದಿದೆ. ಗ್ರಾಮ ಲೆಕ್ಕಿಗರು ಒಂದೊಮ್ಮೆ ಬೆಳೆಗಾರರಿಗೆ ಚೆಕ್ ತಲುಪಿಸದೆ ಇದ್ದಲ್ಲಿ ನನ್ನ ಗಮನಕ್ಕೆ ತಂದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.