ತಿಮ್ಮಾಪುರದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ
ತರೀಕೆರೆ: ಎರಡು ಕೋಟಿ ರು. ಶಾಸಕರ ನಿಧಿಗೆ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಸೋಮವಾರ ಸಮೀಪದ ತಿಮ್ಮಾಪುರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತಾಡುತ್ತಿದ್ದರು.
ಸಮುದಾಯ ಭವನಕ್ಕೆ ನೆರವು: ಜಿಲ್ಲಾಧಿಕಾರಿಗಳ ಬಳಿ ಮೂತನಾಡಿ ತಿಮ್ಮಾಪುರ ಗ್ರಾಮಕ್ಕೆ ಪ್ರತ್ಯೇಕವಾಗಿ ಚುನಾವಣಾ ಮತಗಟ್ಟೆ ಮಂಜೂರು ಮಾಡಿಸಲಾಗುವುದು, ಸಂಸತ್ ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ 75 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದ ಅವರು ತಿಮ್ಮಾಪುರ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ನೀಡಿ ಮುಂದಿನ ಕೆಲಸವನ್ನು ನಾವು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ಮಾತನಾಡಿ, ತಾ.ಪಂ.ಅನುದಾನದಲ್ಲಿ ಅಂಗನವಾಡಿ ನಿರ್ಮಿಸಲಾಗಿದೆ. ಬುಕ್ಕಾಂಬುದಿ ಕೆರೆಯಿಂದ ನೀರು ಹರಿದು ಬರುವ ಕಾಲುವೆ ಹೂಳು ತೆಗೆಸಲಾಗುವುದು, ತಿಮ್ಮಾಪುರ ಗ್ರಾಮದಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗುವುದು ಮತ್ತು ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ತಾ.ಪಂ. ಸದಸ್ಯ ವಿರುಪಾಕ್ಷಪ್ಪ ಮಾತನಾಡಿದರು. ತಾ.ಪಂ.ಅಧ್ಯಕ್ಷೆ ಶಾಂತ ಗುರುಮೂರ್ತಿ, ತಾ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ಮಂಜಮ್ಮ,, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಬಿ.ಎಸ್.ಆರ್. ಮಂಜುನಾಥ್, ಎ.ಸಿ. ಚಂದ್ರಪ್ಪ, ರಾಮಚಂದ್ರಪ್ಪ, ಚಂದ್ರಪ್ಪ, ಜ್ಯೋತಿಲಕ್ಷ್ಮಿ, ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.