ರಾಜಿನಾಮೆಗೆ ಜೆಡಿಎಸ್ ಒತ್ತಾಯ
ನರಸಿಂಹರಾಜಪುರ: ಶಾಸಕ ಡಿ.ಎನ್. ಜೀವರಾಜ್ ಮತ್ತು ಇಬ್ಬರು ಬಿಜೆಪಿ ಮುಖಂಡರ ಮೇಲೆ ಯುವತಿಯೊಬ್ಯೊಬ್ಬಳು ಅತ್ಯಾಚಾರದ ಆರೋಪ ಮಾಡಿರುವುದರಿಂದ ಶೃಂಗೇರಿ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ಶಾಸಕರು ರಾಜಿನಾಮೆ ನೀಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಒತ್ತಾಯಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರದ ಶಾಸಕರಾಗಿ ಈ ಹಿಂದೆ ಕಡಿದಾಳ್ ಮಜಪ್ಪ, ವೀರಪ್ಪಗೌಡ, ಗೋವಿಂದೇಗೌಡ ಮುಂತಾದ ಪ್ರಾಮಾಣಿಕ, ದಕ್ಷರು ಆಯ್ಕೆಯಾಗಿ ಕ್ಷೇತ್ರಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟಿದ್ದರು. ಈಗ ಶೃಂಗೇರಿ ಕ್ಷೇತ್ರಕ್ಕೆ ಕಳಂಕ ಬಂದಿದೆ ಎಂದರು.
ನಿಷ್ಪಕ್ಷ ತನಿಖೆ ಬೇಕು; ಯುವತಿಯೊಬ್ಬರು ನೀಡಿದ ದೂರಿನ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ ಅತ್ಯಾಚಾರದ ಆರೋಪ ಮಾಡಿರುವುದರಿಂದ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾಗಿದೆ. ಸ್ಥಳೀಯ ಪೊಲೀಸರಿಗೆ ಶಾಸಕರ ಬಗ್ಗೆ ತನಿಖೆ ಮಾಡಲು ಕಷ್ಟವಾಗುತ್ತದೆ. ಸರ್ಕಾರ ಸಿಬಿಐ, ಸಿಒಡಿ ತನಿಖೆ ನಡೆಸಬೇಕು ಎಂದು ರಾಜೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹೊಸೂರು ಸುರೇಶ್, ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ, ತಾಪಂ ಸದಸ್ಯ ಶಾಂತಕುಮಾರ್ ಇದ್ದರು.