ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೈಚಾರಿಕತೆ ಬೆಳೆಸಿದರೆ ಮೌಢ್ಯ ನಿಲ್ಲುತ್ತದೆ

Rashmi Kasaragodu
Updated On : 12 Nov 2013, 11:34 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ನ.11
ರಾಜ್ಯ ತೋಟ ಕಾರ್ಮಿಕರ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹುಲಿಕಲ್ ನಟರಾಜ್ ಅವರಿಂದ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಸಮಾಜದಲ್ಲಿ ನಡೆಯುತ್ತಿರುವ ಅನೇಕ ಪವಾಡಗಳ ಅಸಲೀ ಬಣ್ಣವನ್ನು ಬಯಲು ಮಾಡುವಲ್ಲಿ ಯಶಸ್ವಿಯಾಯಿತು.
ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಪುನರ್ಜನ್ಮ, ಜನ್ಮಾಂತರ, ಹೀಗೂ ಉಂಟೇ, ವಿಸ್ಮಯಲೋಕ ಸೇರಿದಂತೆ ಅನೇಕ ಕಾರ್ಯಕ್ರಮಗಳು ಮತ್ತು ಸಮಾಜದಲ್ಲಿ ಕಂಡು ಬರುವ ಅನೇಕ ಪವಾಡಗಳ ಹಿಂದಿನ ಕೈಚಳಕ ಮತ್ತು ವೈಜ್ಞಾನಿಕ ಸತ್ಯವನ್ನು ಪ್ರೇಕ್ಷಕರೆದುರು ನಟರಾಜ್ ಅವರು ಎಳೆ ಎಳೆಯಾಗಿ ಬಿಡಿಸಿಡುವ ಮೂಲಕ ಅವರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದರು.
ವಿಸ್ಮಿತರಾದ ಪ್ರೇಕ್ಷಕರು: ಬ್ಲೇಡ್ ಬಾಬಾನ ಆಪರೇಷನ್ ಚಮತ್ಕಾರ, ಜಾಲಿಮುಳ್ಳುಗಳು ಮತ್ತು ಮುಳ್ಳಿನ ಹಾಸಿಗೆಯ ಮೇಲೆ ಮಲಗುವುದು, ಕೊಡದಿಂದ ಹೂ ಬರಿಸುವುದು, ಶೂನ್ಯದಿಂದ ವಿಭೂತಿ ಸೃಷ್ಟಿಸುವುದು, ಗಾಜಿನ ಚೂರುಗಳ ಮೇಲೆ ನಡೆಯುವುದು ಸೇರಿದಂತೆ ಅನೇಕ ಚಮತ್ಕಾರಗಳನ್ನು ಸಾರ್ವಜನಿಕರಿಂದಲೇ ಮಾಡಿಸುವುದರ ಜೊತೆಗೆ ಅವುಗಳ ಹಿಂದಿನ ಗುಟ್ಟನ್ನು ರಟ್ಟು ಮಾಡುವ ಮೂಲಕ ಪ್ರೇಕ್ಷಕರಲ್ಲಿ ವಿಸ್ಮಯ ಮೂಡಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡರ ಕೈಮೇಲೆ ಹೊತ್ತಿ ಉರಿಯುತ್ತಿದ್ದರೂ ಕೈಸುಡದ ಕರ್ಪೂರದ ಉಂಡೆಯನ್ನು ಇಡುವ ಮೂಲಕ ಸಭಿಕರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರಾಧಾ ಸುಂದ್ರೇಶ್ ಮತ್ತು ಅಧ್ಯಕ್ಷೆ ರೇಖಾಹುಲಿಯಪ್ಪಗೌಡರ ಚಿನ್ನದ ಸರ ಮತ್ತು ಉಂಗುರಗಳನ್ನು ಡಬ್ಬದಲ್ಲಿ ಹಾಕಿ ಕ್ಷಣಾರ್ಧದಲ್ಲಿ ಮಾಯ ಮಾಡಿ ಅದರ ಬದಲಿಗೆ ಅದೇ ಡಬ್ಬದಿಂದ ಅವರ ತಲೆಯ ಮೇಲೆ ಹೂ ಸುರಿಸುವ ಮೂಲಕ ಅಚ್ಚರಿ ಮೂಡಿಸಿದರು.
ವೈಚಾರಿಕ ಚಿಂತನೆ ಬೆಳೆಸಿ: ಇದೇ ವೇಳೆ ಕಿರುತೆರೆ ಕಲಾವಿದ ರವೀಂದ್ರನಾಥ್ ಅವರಿಂದ ನಡೆದ ಮಿಮಿಕ್ರಿ ಕಾರ್ಯಕ್ರಮ ಕಲಾಮಂದಿರದಲ್ಲಿ ನಗೆಯ ಬುಗ್ಗೆಯನ್ನು ಎಬ್ಬಿಸಿತು. ಹುಲಿಕಲ್ ನಟರಾಜ್ ಮಾತನಾಡಿ, ರಾಜ್ಯ ಸರ್ಕಾರ ಮೌಢ್ಯದ ವಿರುದ್ಧ ಕಾನೂನು ಮಾಡಲು ಹೊರಟಿರುವುದನ್ನು ಪ್ರಸ್ತಾಪಿಸಿ ಜನರ ನಂಬಿಕೆಯನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾನೂನಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಜನರಲ್ಲಿ ವೈಚಾರಿಕ ಚಿಂತನೆ ಬೆಳೆಸಿದರೆ ಮೌಢ್ಯ ನಿಲ್ಲುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅನಕ್ಷರಸ್ಥರಿಗಿಂತ ಹೆಚ್ಚಾಗಿ ವಿದ್ಯಾವಂತರೇ ಇಂದು ಮೌಢ್ಯಕ್ಕೆ ಕಂದಾಚಾರಗಳಿಗೆ ಬಲಿಯಾಗುತ್ತಿರುವುದು ಅಂಧಶ್ರದ್ದೆಯಿಂದ ಅವು ಗಳನ್ನು ಅನುಸರಿಸುತ್ತಿರುವುದು ದುರಂತ ಎಂದರು.
ಜನತೆ ಪವಾಡಗಳನ್ನು ನೋಡಿ ಬೆರಗುಗೊಳ್ಳುವುದನ್ನು ಬಿಟ್ಟು ಅವುಗಳ ಸತ್ಯಾಸತ್ಯತೆಯನ್ನು ಅರಿಯಬೇಕು. ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಮಂಜಪ್ಪ, ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಸಿ. ಪ್ರಕಾಶ್, ಬಂಟರ ಸಂಘದ ಅಧ್ಯಕ್ಷ ಕರುಣಾಕರ ಹೆಗ್ಡೆ, ಜಾದೂಗಾರ ಮಲ್ಯ, ಪಿ. ಸುದೀಶ್ ಕುಮಾರ್, ಬಳ್ಳಾರಿ ಭಾಷಾ, ಉದ್ಯಮಿಗಳಾದ ಆರ್. ರಂಗಸ್ವಾಮಿ, ಸುರೇಶ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ನಿಂಗೇಗೌಡ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement