ಕನ್ನಡ ಆಚಾರ ಸಂಸ್ಕೃತಿಯ ಅವಿಭಾಜ್ಯ ಅಂಗ
ಶಿಕಾರಿಪುರ: ಕನ್ನಡ ಕೇವಲ ಭಾಷೆ ಮಾತ್ರವಲ್ಲದೆ ನಾಡಿನ ಸಮಸ್ತ ಜನತೆಯ ಜೀವನ ಪದ್ಧತಿ ಆಚಾರ ವಿಚಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ತಾಲೂಕಿನ ಚುರ್ಚುಗುಂಡಿಯ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಶಶಿಧರ ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾಮದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ತಾಳಗುಂದ ಕನ್ನಡದ ಪ್ರಥಮ ಕದಂಬ ರಾಜ ಮಯೂರವರ್ಮನ ಮೂಲ ನೆಲೆಯಾಗಿದ್ದು, ಈ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಜಿಲ್ಲಾಡಳಿತ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.
ಎಲ್ಲರ ಕರ್ತವ್ಯ: ಕನ್ನಡ ಪ್ರಥಮ ರಾಜವಂಶಸ್ಥ ಕದಂಬರು ನೆಲೆಸಿದ ಐತಿಹಾಸಿಕ ಸ್ಥಳದ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಈ ದಿಸೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಾಳಗುಂದ ಹಾಗೂ ಸುತ್ತಮುತ್ತಲಿನ ಸ್ಥಳದ ಮಹತ್ವದ ಬಗ್ಗೆ ಬೆಳಕು ಚೆಲ್ಲುವ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
ಕಾನ್ವೆಂಟ್ ಸಂಸ್ಕೃತಿಯ ಪ್ರಭಾವದಿಂದ ಇಂಗ್ಲಿಷ್ ಭಾಷೆಯಿಂದ ಮಾತ್ರ ಸ್ವರ್ಗ, ಕನ್ನಡ ಕಲಿತರೆ ನರಕ ಎಂಬ ಕೀಳರಿಮೆ ಹೆಚ್ಚಾಗಿದ್ದು, ಗ್ರಾಮೀಣ ಭಾಗದಲ್ಲಿಯೂ ಈ ರೀತಿಯ ಮನೋಭಾವ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಕಾನ್ವೆಂಟ್ ಸಂಸ್ಕೃತಿ ತಡೆಯಲು ಕಾಯ್ದೆಯನ್ನು ಸರ್ಕಾರ ರೂಪಿಸಬೇಕಾದ ಅನಿವಾರ್ಯತೆ ಹೆಚ್ಚಿದೆ ಎಂದರು.
ವಿಶ್ವದ ಗಮನ: ಶ್ರೀಮಂತ ಭಾಷೆ ಕನ್ನಡದಲ್ಲಿನ ಜ್ಞಾನ ಸಾಹಿತ್ಯ ವಿಶ್ವದ ಗಮನ ಸೆಳೆಯುತ್ತಿದ್ದು, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತವಾದ ಏಕೈಕ ಭಾಷೆ ಕನ್ನಡ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ ಎಂದರು.
ಕನ್ನಡ ಕೇವಲ ಭಾಷೆ ಮಾತ್ರವಲ್ಲದೆ ಎಲ್ಲಾ ಜನಾಂಗ, ವರ್ಗದ ಜನ ಆಚರಿಸುತ್ತಿರುವ ಜೀವನ ಪದ್ಧತಿ, ಆಚಾರ ವಿಚಾರ ಭಾಷೆ ಸಂಸ್ಕೃತಿಯ ಅಂಗವಾಗಿದ್ದು, ಪುರಾತನ ಕಾಲದಿಂದ ಹಬ್ಬ ಹರಿದಿನಗಳನ್ನು ಆಚರಿಸುತ್ತಿರುವ ಕಲೆ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ನಶಿಸದಂತೆ ಗ್ರಾಮೀಣ ಭಾಗದಲ್ಲಿನ ಯುವ ಪೀಳಿಗೆ ಎಚ್ಚರ ವಹಿಸಬೇಕಾಗಿದೆ ಎಂದರು.
ಮೂಲ ಅರ್ಥ ಮಾಯ: ಗ್ರಾಮದ ಹಿರಿಯ ಮುಖಂಡ ಮಲ್ಲೇಶಪ್ಪ ಮಾತನಾಡಿ, ಅಬ್ಬರದ ಸಂಗೀತ, ರಸಮಂಜರಿಗೆ ಮಾತ್ರ ರಾಜ್ಯೋತ್ಸವ ಸೀಮಿತವಾಗಿ ಮೂಲ ಅರ್ಥವನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನದಲ್ಲಿ ಸಂಘದ ವತಿಯಿಂದ ಗೋಲಿ ಆಟ, ಕಬಡ್ಡಿ ಮತ್ತಿತರ ಗ್ರಾಮೀಣ ಕ್ರೀಡೆ ಆಯೋಜಿಸಿರುವುದನ್ನು ಶ್ಲಾಘಿಸಿದರು.
ಕನ್ನಡದ ಧ್ವಜಾರೋಹಣ ನಡೆಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಭುವನೇಶ್ವರಿ ಮೆರವಣಿಗೆ ನಡೆಯಿತು.
ಉಡುಪಿಯ ಮಹಿಳಾ ಚಂಡೆ, ಮಕ್ಕಳ ಆಕರ್ಷಕ ಪಥಸಂಚಲನ, ಡೊಳ್ಳು, ಭಜನೆ ಎಲ್ಲರ ಗಮನ ಸೆಳೆಯಿತು.
ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ, ಶಿಕ್ಷಕರು, ಗ್ರಾಮದ ಹಿರಿಯರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.