ಮಲ ಹೊರುವ ಪದ್ಧತಿ: ಡಿಸಿಗೆ ದೂರು ನೀಡಿ
ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು ಸೇರಿದಂತೆ ಯಾವುದೇ ಕಾರ್ಮಿಕರು ಮಲ, ಮೂತ್ರಗಳನ್ನು ಸ್ವಚ್ಛತೆ ಮಾಡುವ ಅನಿಷ್ಟ ಪದ್ಧತಿಯನ್ನು ಇನ್ನೂ ಮುಂದುವರೆದಿದ್ದರೆ ಸ್ವಯಂ ಪ್ರೇರಿತರಾಗಿ ಹೊರಬಂದು ಜಿಲ್ಲಾಧಿಕಾರಿ ಅಥವಾ ಆಯೋಗಕ್ಕೆ ಮಾಹಿತಿ ನೀಡುವಂತೆ ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಶ್ರೀರಾಮುಲು ಹೇಳಿದ್ದಾರೆ.
ಜಿಲ್ಲಾ ಪೌರಸೇವಾ ನೌಕರರ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಗರಸಭೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಮಲಹೋರುವಂತ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಿ ಸರ್ಕಾರ ಆದೇಶಿಸಿದ್ದು ಈಗಲೂ ಅಂತಹ ಪದ್ಧತಿ ಜೀವಂತವಾಗಿದ್ದರೆ ತಕ್ಷಣದಿಂದ ಆ ವೃತ್ತಿಯನ್ನು ಕೈಬಿಟ್ಟು ಜಿಲ್ಲಾಧಿಕಾರಿಗಳು ಅಥವಾ ಆಯೋಗಕ್ಕೆ ತಿಳಿಸಿದರೆ ಬೇರೆ ಉದ್ಯಮದಲ್ಲಿ ತೊಡಗಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಲಿಖಿತ ದೂರು ನೀಡಿ: ನಗರಸಭೆ, ಶಾಲೆ, ಕಾರ್ಖಾನೆ, ಕಚೇರಿಗಳಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಾಚಾರಿಗಳಿಗೆ ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಇಲಾಖೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುವುದು ಸೇರಿದಂತೆ ಅನೇಕ ಸೌಲಭ್ಯಗಳಿವೆ, ಸರ್ಕಾರದ ಸೌಲತ್ತುಗಳು ಸಿಗದ ಅವಕಾಶ ವಂಚಿತರು ಶೋಷಣೆಗೊಳಗಾಗಿದ್ದರೆ ಲಿಖಿತ ದೂರು ನೀಡಿದರೆ ಅಂತಹ ಫಲಾನುಭವಿಗಳಿಗೆ ಸ್ಪಂದಿಸುವ ಜೊತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಸಾರ್ವಜನಿಕರಿಗಾಗಿ ಮುಡಿಪು: ಜಿಲ್ಲಾ ಪೌರಸೇವಾ ನೌಕರರ ಸಂಘದ ಶಾಖಾಧ್ಯಕ್ಷ ಬಿ. ಅಣ್ಣಯ್ಯ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದಿನದ 24 ಗಂಟೆಗಳು ನಗರದ ಸ್ವಚ್ಛತೆಗಾಗಿ ದುಡಿದು ತಮ್ಮ ಜೀವನವನ್ನು ಸಾರ್ವಜನಿಕ ಹಿತಾಸಕ್ತಿಗೆ ಮುಡುಪಾಗಿಟ್ಟಿದ್ದಾರೆ.
ಸರ್ಕಾರ ಪೌರ ಕಾರ್ಮಿಕರಿಗೆ ಶೇ. 22.75 ರ ಅನುದಾನ ಮೀಸಲಿಟ್ಟಿದ್ದರೂ ಆ ಯೋಜನೆಯ ಸದುಪಯೋಗ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಹೇಳಿದರು.
ಸವಲತ್ತುಗಳ ದುರುಪಯೋಗ: ಸಫಾಯಿ ಕರ್ಮಾಚಾರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಶೇ.22.75 ರ ಅನುದಾನಗಳು ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಸುಧಾರಣೆ ಮತ್ತು ಕಾಲೋನಿಗಳ ಅಭಿವೃದ್ಧಿಗೆ ಮೀಸಲಿದ್ದರು ಪ್ರಯೋಜನವಾಗದೆ ಕೆಲವು ಇಲಾಖೆಗಳಲ್ಲಿ ನಮಗೆ ದೊರಕಬೇಕಾದ ಸವಲತ್ತುಗಳು ದುರುಪಯೋಗವಾಗುತ್ತಿದೆ.
ಈ ಬಗ್ಗೆ ಅಧ್ಯಕ್ಷರು ಗಮನ ಹರಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಪಿ. ಗುರುಮೂರ್ತಿ, ದಸಂಸ ಜಿಲ್ಲಾ ಸಂಚಾಲಕ ಕೆ. ಕುಮಾರ್ ಮಾತನಾಡಿದರು. ಸಫಾಯಿ ಕರ್ಮಾಚಾರಿ ಆಯೋಗದ ಕಾರ್ಯದರ್ಶಿ ಮೋಹನ್, ವಿಶೇಷ ಅಧಿಕಾರಿ ಖರ್ಗೆ, ಪೌರಾಯುಕ್ತ ಪುರುಶೋತ್ತಮ್, ರಮೇಶ್ ನಾಯ್ಡು, ವ್ಯವಸ್ಥಾಪಕ ಕಾಂತರಾಜು, ಎನ್. ಅಣ್ಣಯ್ಯ, ಆದೀಶ್, ಶ್ರೀನಿವಾಸ್, ಸುನಿಲ್, ಎನ್. ನಾಗರಾಜು, ಸಿ.ಬಿ. ನಾಗರಾಜು, ಗೋಪಿ ಮತ್ತಿತರರು ಉಪಸ್ಥಿತರಿದ್ದರು.