ರೇಲ್ವೆ ನಿಲ್ದಾಣಕ್ಕೆ ಇಂದಿರಾ ಗಾಂಧಿ ಹೆಸರಿಡಿ: ಮಹಮ್ಮದ್ ಅಕ್ಬರ್
ಚಿಕ್ಕಮಗಳೂರು: ಚಿಕ್ಕಮಗಳೂರಿನ ರೈಲ್ವೆ ನಿಲ್ದಾಣಕ್ಕೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಹೆಸರಿಡುವಂತೆ ಕಡೂರು- ಚಿಕ್ಕಮಗಳೂರು ರೈಲ್ವೆ ಯೋಜನೆ ಮಂಜೂರಾತಿಗೆ 1995ರಲ್ಲಿ ಪ್ರಧಾನಿ ಭೇಟಿ ಮಾಡಲು ತೆರಳಿದ್ದ ನಿಯೋಗದ ಸಂಚಾಲಕ ಮಹಮದ್ ಅಕ್ಬರ್ ಆಗ್ರಹಿಸಿದ್ದಾರೆ.
ಅಂದಿನ ಕೇಂದ್ರ ಸಚಿವರಾಗಿದ್ದ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಡಿ.ಕೆ. ತಾರಾದೇವಿಯವರ ಪರಿಶ್ರಮದ ಫಲವಾಗಿ ಕಡೂರು- ಚಿಕ್ಕಮಗಳೂರು ರೈಲ್ವೆ ಯೋಜನೆಗೆ ಅನುಮೋದನೆ ಸಿಕ್ಕಿ ಬಜೆಟ್ನಲ್ಲಿ ಇಡಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ನ.19 ರಂದು ನಡೆಯಲಿರುವ ರೈಲ್ವೆ ಉದ್ಘಾಟನಾ ಕಾರ್ಯಕ್ರಮಕ್ಕೆ ತಾರಾದೇವಿ ಅವರಿಗೆ ಆಹ್ವಾನ ನೀಡಿ, ಅವರನ್ನು ಸನ್ಮಾನಿಸಬೇಕು ಎಂದು ಆಗ್ರಹಿಸಿದರು. ಇಂದಿರಾಗಾಂಧಿಯವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಿದಾಗ ಚಿಕ್ಕಮಗಳೂರಿಗೆ ರೈಲು ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಬಹಳ ವರ್ಷ ಈಡೇರಲು ಆಗಲಿಲ್ಲ. ತಾರಾದೇವಿ ಕೇಂದ್ರದ ಸಚಿವರಾಗಿದ್ದಾಗ ಜಿಲ್ಲೆಯ ರಾಜಕೀಯ ಮುಖಂಡರು, ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮರ್ಚೆಂಟ್ ಕ್ಲಾಸ್ ಅಸೋಸಿಯೇಷನ್ ರವರ ಪ್ರತಿನಿಧಿಗಳನ್ನು ಒಳಗೊಂಡ ಸುಮಾರು 30 ಜನರ ನಿಯೋಗವನ್ನು ದೆಹಲಿಗೆ ಕರೆದೊಯ್ದು ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರನ್ನು ಭೇಟಿ ಮಾಡಿಸಿ ಈ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಂ. ಮಂಜುನಾಥ್, ಎಚ್.ಡಿ. ರಾಮೇಗೌಡ, ಡಿ.ಕೆ. ಉದಯಶಂಕರ್ ಉಪಸ್ಥಿತರಿದ್ದರು.