ಶಾಸಕ ಸಿ.ಟಿ. ರವಿ ಹೇಳಿಕೆಗೆ ಶೇಖಬ್ಬ ಖಂಡನೆ
ನರಸಿಂಹರಾಜಪುರ: ಮುಸ್ಲಿಂ ಮಹಿಳೆಯರು ಧರಿಸುವ ಬುರ್ಕಾವನ್ನು ನಿಷೇಧಿಸುವಂತೆ ಶಾಸಕ ಸಿ.ಟಿ. ರವಿ ನೀಡಿರುವ ಹೇಳಿಕೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಎನ್.ಎ. ಶೇಖಬ್ಬ ಖಂಡಿಸಿದ್ದಾರೆ.
ರಾಜ್ಯ ಸರ್ಕಾರದ ಉದ್ದೇಶಿತ ಮೂಢನಂಬಿಕೆ ಪ್ರತಿಬಂಧಕ ಮಸೂದೆಗೆ ಸಂಬಂಧಿಸದಂತೆ ಇಸ್ಲಾಂ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಧರ್ಮ- ಧರ್ಮಗಳ ಮಧ್ಯೆ ಇಬ್ಬಾಗ ಮಾಡುವ ರೀತಿಯಲ್ಲಿ ಶಾಸಕ ಸಿ.ಟಿ. ರವಿ ಹೇಳಿಕೆ ನೀಡಿ ಹಿಂದೂ- ಮುಸ್ಲಿಂ ಬಾಂಧವ್ಯವನ್ನು ಕದಡಲು ಯತ್ನಿಸುತ್ತಿದ್ದಾರೆ.
ಮುಸ್ಲಿಂ ಮಹಿಳೆಯರ ಉಡುಪಿನ ಸಭ್ಯತೆಯ ಪ್ರತೀಕವೇ ಬುರ್ಕಾವಾಗಿದೆ. ಶಾಸಕ ಸಿ.ಟಿ. ರವಿ ಇನ್ನಾದರೂ ಮುಸ್ಲಿಂ ಸಂಪ್ರದಾಯ, ಕಟ್ಟುಪಾಡುಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.