ಸಿಸಿಟಿವಿ ಕಣ್ಗಾವಲಿನಲ್ಲಿ ಶಾಲಾ ಮಕ್ಕಳು
ಶಿವಮೊಗ್ಗ: ನಗರದ ಪೋದಾರ್ ಶಾಲೆ ಮಕ್ಕಳಿನ್ನು ಸಿಸಿಟಿವಿ ಕಣ್ಗಾವಲಿನಲ್ಲೇ ಮನೆಯಿಂದ ಶಾಲೆಗೆ ಬಂದು ಹೋಗಲಿದ್ದಾರೆ.
ಶಿವಮೊಗ್ಗ ಮಟ್ಟಿಗೆ ಇಂತಹದ್ದೊಂದು ಅಪ್ಡೇಟ್ ಆದ ವ್ಯವಸ್ಥೆಯನ್ನು ಶಾಲೆಯ ಆಡಳಿತ ಮಂಡಳಿಗೆ ಜಾರಿಗೆ ತಂದಿದ್ದು, ಈ ವ್ಯವಸ್ಥೆಯ ಶಾಲೆಯ ಮಕ್ಕಳು ಹಾಗೂ ಪೋಷಕರಲ್ಲಿ ಖುಷಿತಂದಿದ್ದರೆ, ಆಡಳಿತ ಮಂಡಳಿಗೆ ಹೊಸ ತಂತ್ರಜ್ಞಾನ ಬಳಸಿಕೊಂಡ ತೃಪ್ತಿ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೊಸ ವ್ಯವಸ್ಥೆ ಕುರಿತು ವಿವರಣೆ ನೀಡಿದ ಶಾಲೆಯ ಪ್ರಾಂಶುಪಾಲ ಶಿವಾನಂದ್, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿಕೆಯೊಂದಿಗೆ ಸಾರಿಗೆ ಇಲಾಖೆ ನಿಯಮದಂತೆ ಶಾಲೆಯ ಎಲ್ಲಾ ಬಸ್ಗಳನ್ನು ಸಜ್ಜುಗೊಳಿಸಲಾಗಿದೆ. ಇದಕ್ಕಿಂತ ಒಂದು ಹೆಜ್ಜೆ ಮುಂದಡಿ ಇಟ್ಟು ಎಲ್ಲಾ ಶಾಲಾ ಬಸ್ಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ ಎಂದರು.
ಮೊದಲು ಪ್ರಾರಂಭ: ಗಾಂಧಿಜಿಯವರು ಮೊದಲು ಅಧ್ಯಕ್ಷರಾದ ಪೋದಾರ್ ಶಿಕ್ಷಣ ಸಂಸ್ಥೆ ಶಿವಮೊಗ್ಗದಲ್ಲಿ 2012ರಲ್ಲಿ ಶಾಲೆ ಆರಂಭಿಸಿತು. ಉತ್ತಮ ಶಿಕ್ಷಣ ನೀಡುವ ಜೊತೆಗೆ ಪೋಷಕರ ನಿರೀಕ್ಷೆಗೆ ತಕ್ಕಂತೆ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ. ಶಾಲೆಯ ಶೇ.80 ಮಕ್ಕಳು ಶಾಲಾ ಬಸ್ ಸೇವೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳಿಗೆ ಸಿಸಿ ಟಿವಿ ಅಳವಡಿಸಲಾಗಿದೆ ಎಂದವರು ಹೇಳಿದರು.
ಜೊತೆಗೆ ಪ್ರತಿ ಬಸ್ಗೆ ಒಬ್ಬ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ, ಹಾಗೆಯೇ ಪ್ರತಿ ಬಸ್ನಲ್ಲಿ 48 ವಿದ್ಯಾರ್ಥಿಗಳಷ್ಟೇ ಪ್ರಯಾಣ ಮಾಡುತ್ತಾರೆ. ಸಿಸಿ ಟಿವಿ ಅಳವಡಿಕೆಯಿಂದಾಗಿ ಪೋಷಕರಲ್ಲಿಯೂ ತಮ್ಮ ಮಕ್ಕಳ ಬಗ್ಗೆ ಇರುವ ಆತಂಕ ದೂರವಾಗಿದೆ ಎಂದು ತಿಳಿಸಿದರು.
3 ತಿಂಗಳಿಗೊಮ್ಮೆ ಸಭೆ: ಈಗಾಗಲೇ ಬಸ್ ಕಮಿಟಿ ರಚಿಸಲಾಗಿತ್ತು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಈ ಸಮಿತಿಯು ಸಿಸಿಟಿವಿಯ ಫುಟೇಜನ್ನು ಆಗಿಂದಾಗ್ಗೆ ಪರಿಶೀಲಿಸುತ್ತದೆ. ಇದರಿಂದ ಮಕ್ಕಳಲ್ಲೂ ಶಿಸ್ತು ಪಾಲನೆ ಕಂಡುಬಂದಿದೆ. ಮುಂದೆ ಸದ್ಯವೇ ಶಾಲಾ ಬಸ್ನಲ್ಲಿ ಸೀಟ್ ಬೆಲ್ಟ್ ಅಳವಡಿಸಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪೋದಾರ್ ಜಂಬೋಕಿಡ್ಸ್ ಪ್ರಾಂಶುಪಾಲರಾದ ದೀಪ, ಬಸ್ ಕಮಿಟಿ ಸದಸ್ಯರಾದ ಚಿದಾನಂದ್ , ಪ್ರಸನ್ನಕುಮಾರ್, ನಾಗರಾಜ್, ಫೈರೋಜ್, ಪೋದಾರ್ ಜಿಲ್ಲಾ ಆಡಳಿತಾಧಿಕಾರಿ ಫಿರೋಜ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.