ಅಂಟಿಗೆ- ಪಂಟಿಗೆ ಸಂಸ್ಕೃತಿ ಬಿಂಬಿಸುವ ಕಲೆ: ಮಹೇಶ್
ನರಸಿಂಹರಾಜಪುರ: ಅಂಟಿಕೆ- ಪಿಂಟಿಕೆ ನಮ್ಮ ಸಂಸ್ಕೃತಿ, ಧರ್ಮವನ್ನು ಬಿಂಬಿಸುವ ಕಲೆಯಾಗಿದೆ ಎಂದು ಜಾನಪ ಕಲಾವಿದ ಎಂ. ಮಹೇಶ್ ತಿಳಿಸಿದರು.
ತಾಲೂಕಿನ ಶೆಟ್ಟಿಕೊಪ್ಪದಲ್ಲಿ ನಡೆದ ಅಂಟಿಕೆ- ಪಿಂಟಿಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅಂಟಿಕೆ- ಪಿಂಟಿಕೆ ಎಂಬ ಜಾನಪದ ಕಲೆಯು ಮಲೆನಾಡಿನ ಕೆಲವು ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ದೀಪಾವಳಿ ಹಬ್ಬದ ಬಲಿಪಾಡ್ಯದಂದು ರಾತ್ರಿ ದೇವಸ್ಥಾನದಲ್ಲಿ ಜ್ಯೋತಿ ಹಚ್ಚಲಾಗುತ್ತದೆ. ನಂತರ ರಾತ್ರಿಯಲ್ಲಿ ಪ್ರತಿ ಮನೆ, ಮನೆಗಳಿಗೆ ತೆರಳಿ ಜ್ಯೋತಿ ನೀಡಿ ಪೂಜೆ ಸಲ್ಲಿಸಿ ಗ್ರಾಮಸ್ಥರು ನೀಡುವ ದವಸ ಧಾನ್ಯ, ಕಾಣಿಕೆಗಳನ್ನು ಸಂಗ್ರಹಿಸಿ ಮನೆಗಳ ಕುಟುಂಬದವರನ್ನು ಹರಿಸ ಬರಲಾಗುತ್ತದೆ ಎಂದರು.
ಈ ಜಾನಪದ ಕಲೆಯನ್ನು 3 ರಿಂದ 9 ದಿನಗಳ ಕಾಲದವರೆಗೂ ನಿಂತರವಾಗಿ ಹಮ್ಮಿಕೊಳ್ಳಲಾಗುತ್ತದೆ. ಗ್ರಾಮಸ್ಥರು ನೀಡಿದ ವಂತಿಕೆಯನ್ನು ಗ್ರಾಮದ ಕಾಮಗಾರಿ ಅಥವಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಅಂಟಿಕೆ- ಪಿಂಟಿಕೆ ಕಲಾವಿದ ಹಾಗೂ ತಾಲೂಕು ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ ಎನ್.ಎಂ. ಕಾಂತರಾಜ್ ಮಾತನಾಡಿ, ಮರೆಯಾಗುತ್ತಿರುವ ಅಂಟಿಕೆ ಪಿಂಟಿಕೆ ಕಲೆಯನ್ನು ಯುವ ಜನರು ಉಳಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಂಟಿಕೆ- ಪಿಂಟಿಕೆ ಕಾರ್ಯಕ್ರಮದ ವ್ಯವಸ್ಥಾಪಕ ಅನುಪ್ಕುಮಾರ್ ವಹಿಸಿದ್ದರು. ಸಭೆಯಲ್ಲಿ ಭೀಮನರಿ ಪ್ರಶಾಂತ್, ಎ.ಎಸ್. ಮಂಜುನಾಥ್, ಅರಸಿಕೆರೆ ಪ್ರವೀಣ್, ಕೆ.ಆರ್. ಕೃಷ್ಣಯ್ಯ, ಜಲಜಾಕ್ಷಮ್ಮ, ವೆಂಕಟೇಶ್, ಹೂವಣ್ಣ, ಎಸ್.ಎಸ್. ಸೋಮಣ್ಣ, ಜಿ.ಎಸ್. ಮುರಳೀಧರ್, ಎಸ್.ಡಿ. ಕೀರ್ತನಾ ಉಪಸ್ಥಿತರಿದ್ದರು.