ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

Rashmi Kasaragodu
Updated On : 14 Nov 2013, 12:09 pm

ಕ.ಪ್ರ.ವಾರ್ತೆ ಟಿ ಕಡೂರು ಟಿ  ನ.13
ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಅನಾಹುತವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ತಡೆಗಟ್ಟಿ ಗಣಿಗಾರಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ಕರವೇ ತಾಲೂಕು ಅಧ್ಯಕ್ಷ ಶಿವಪುರ ದಿನೇಶ್, ವಿಜಯ್, ನಂದೀಶ್ ನೇತೃತ್ವದಲ್ಲಿ ಕಡೂರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅಕ್ರಮ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಘೋಷಣೆ ಕೂಗಿದರು.
ಕೂಡಲೇ ಕ್ರಮ ಅಗತ್ಯ: ಕೂಡಲೇ ಸರ್ಕಾರ ಸೇವಾಪುರದಲ್ಲಿ ಸತ್ಯನಾರಾಯಣ ರೆಡ್ಡಿ ಅವರು ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಇದರ ವಿರುದ್ಧ ಕ್ರಮ ಅಗತ್ಯ ಎಂದರು.
ತಾಲೂಕಿನ ಸೇವಾಪುರದ ಸ.ನಂ. 22ರ 9 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಆದರೆ ಸದರಿ ಪ್ರದೇಶವು ಅರಣ್ಯ ಪ್ರದೇಶದಿಂದ ಶೂನ್ಯ ಅಂತರದಲ್ಲಿದ್ದು, ಇದು ಅರಣ್ಯ ಇಲಾಖೆ ಸುಪರ್ದಿಗೆ ಸೇರಿದೆ. ಈ ಗುತ್ತಿಗೆಯನ್ನು ಗಣಿ ಮತ್ತು ಭೂ ವಿಜ್ಞಾನ ಖನಿಜ ವಿಭಾಗವು ಕಳೆದ 2012 ರ ಏಪ್ರಿಲ್ 3 ರಂದು ಆದೇಶ ರದ್ದು ಪಡಿಸಿದ್ದರೂ ಕೂಡ ಗಣಿಗಾರಿಕೆ ಮುಂದುವರಿಯುತ್ತಿದೆ ಎಂದು ಆರೋಪಿಸಿದರು.
ನಿಯಮ ಮೀರುತಿದೆ: ಗಣಿಗಾರಿಕೆ ಜಾಗದಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ನಿಯಮ ಮೀರಿ ಯಾವುದೇ ಸುರಕ್ಷಣಾ ಕ್ರಮ ತೆಗೆದುಕೊಳ್ಳದೇ ಹಲವಾರು ಜೀವಗಳು ಬಲಿಯಾಗಿವೆ.
ಗಣಿಗಾರಿಕೆಯಿಂದ ಉಂಟಾಗುವ ಹೊಂಡಗಳನ್ನು ಮುಚ್ಚಬೇಕೆಂಬ ಸ್ಪಷ್ಟ ಆದೇಶ ಇದ್ದರೂ, ಮುಚ್ಚದ ಪರಿಣಾಮ ಕಳೆದ ತಿಂಗಳು ತಾಯಿ ಮತ್ತು ಮಗ ಹೊಂಡದಲ್ಲಿ ಬಿದ್ದು ಮೃತರಾಗಿದ್ದಾರೆ ಎಂದು ಆರೋಪಿಸಿದರು.
ಸ್ಫೋಟಕ ಬಳಸುವ ಬಗ್ಗೆ ಮಾರ್ಗದರ್ಶನವಿದ್ದರೂ, ನಿಯಮ ಗಾಳಿಗೆ ತೂರಿ ಪ್ರತಿದಿನ ಸಂಜೆ ಭಾರೀ ಪ್ರಮಾಣದ ಸ್ಫೋಟಕ ಸಿಡಿಸುವುದರಿಂದ ಸೇವಾಪುರ, ಗುಡ್ಡದಹಟ್ಟಿ, ಚಿಕ್ಕ ತಂಗಲಿ, ಕಾನಗೊಂಡಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಮನೆಗಳು ಬಿರುಕು ಕಂಡಿವೆ ಎಂದರು.
ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಅಕ್ರಮ ಗಣಿಗಾರಿಕೆ ರದ್ದುಪಡಿಸಿ ಜನರನ್ನು ಕಾಪಾಡಬೇಕು ಎಂದು ಮನವಿ ಸಲ್ಲಿಸಿದರು.
ಸರ್ಕಾರಕ್ಕೆ ಕಳುಹಿಸಲಾಗುವುದು: ಮನವಿ ಸ್ವೀಕರಿಸಿದ ತಹಸೀಲ್ದಾರ್ ತಮ್ಮಭೋವಿ ಮಾತನಾಡಿ, ಕಲ್ಲು ಗಣಿಗಾರಿಕೆಗೆ ತಾಲೂಕು ಆಡಳಿತ, ಉಪ ವಿಭಾಗಾಧಿಕಾರಿಗಳು, ಜಿಲ್ಲಾಡಳಿತವಾಗಲೀ ಅನುಮತಿ ನೀಡಲು ಬರುವುದಿಲ್ಲ. ಇದು ಸರ್ಕಾರದ ಮಟಕ್ಕೆ ಸಂಭಂದಿಸಿರುವ ವಿಷಯ ಆಗಿರುವುದರಿಂದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಕಾರ್ಯದರ್ಶಿ ಶಶಿಧರ್, ಸಮರಸೇನೆ ಅಧ್ಯಕ್ಷ ವರದರಾಜು, ರಾಜು, ಬೀರೂರು ಘಟಕದ ಅಧ್ಯಕ್ಷ ಕುಮಾರ್, ಕಡೂರು ಮಧು, ಉಪಾಧ್ಯಕ್ಷ ಓಂಕಾರಪ್ಪ, ಕಾರ್ಯಾಧ್ಯಕ್ಷ ಆನಂದ್, ಮಂಜು, ಶ್ರೀನಿವಾಸ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement