ಕಸ ವಿಲೇವಾರಿಗೆ ಆಗ್ರಹ
ಬಾಳೆಹೊನ್ನೂರು: ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿಯ ಜಿಲ್ಲಾಧ್ಯಕ್ಷ ವಿಕ್ಟರ್ ಪಿಂಟೋ ಒತ್ತಾಯಿಸಿದ್ದಾರೆ.
ಕಸ ವಿಲೇವಾರಿಗಾಗಿ ಈ ಹಿಂದೆಯೇ 5 ಎಕರೆ ಪ್ರದೇಶವನ್ನು ಜಿ.ಪಂ ಮುಖ್ಯ ಕಾರ್ಯದಶರ್ಶಿ ಹಾಗೂ ನರಸಿಂಹರಾಜಪುರ ತಹಸೀಲ್ದಾರ್ ಪಂಚಾಯ್ತಿಗೆ ಜಾಗವನ್ನು ನೀಡಿದ್ದರು. ಆದರೆ ಅಂದಿನ ಕಾರ್ಯದಶರ್ಶಿ ಹಾಗೂ ಅಧ್ಯಕ್ಷರ ಬೇಜವಾಬ್ದಾರಿಯಿಂದ ಜಾಗವನ್ನು ವಶಪಡಿಸಿಕೊಂಡಿರಲಿಲ್ಲ.
ತೋಟಗಾರಿಕೆ ಇಲಾಖೆಯ ಬೇಲಿ ಪಕ್ಕದಲ್ಲಿ ಕಸ ವೀಲೆವಾರಿ ಜಾಗ ಭದ್ರಾನದಿ ಹಾಗೂ ಸ್ಮಶಾನಕ್ಕೆ ಹೋಗಲು ನಕಾಶೆಯಲ್ಲಿ ಕಂಡ ದಾರಿ ಇತ್ತು. ಈ ದಾರಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ತೆರವುಗೊಳಿಸುವಂತೆ ಲೋಕಾಯುಕ್ತ ಅಧಿಕಾರಿಗಳು ಪಂಚಾಯತ್ ಕಚೇರಿಗೆ ಬಂದಾಗ ಸೂಚಿಸಿದ್ದು ಪಂಚಾಯ್ತಿಯವರು ಕ್ರಮಕೈಗೊಂಡಿರಲಿಲ್ಲ.
ಕನಾಟಕ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಸಸ್ಯ ಕ್ಷೇತ್ರದಲ್ಲಿ 14 ಎಕರೆ 24 ಗುಂಟೆ ಹೆಚ್ಚುವರಿ ಸ್ವಾಧೀನ ಪಡಿಸಿಕೊಂಡಿದ್ದು, ಹೆಚ್ಚುವರಿ ಪ್ರದೇಶದಲ್ಲಿ 600 ಮೀಟರ್ ಉದ್ದ 20 ಮೀಟರ್ ಅಗಲ ದಾರಿ ಬಿಡುವಂತೆ ಪತ್ರ ಬರೆದು ಜಿಲ್ಲಾಡಳಿತವನ್ನು ಒತ್ತಾಯಿಸಿತ್ತು. ಆದರೆ, ಖಾಸಗಿ ಹಾಗೂ ಇಲಾಖೆ ವಶಪಡಿಸಿಕೊಂಡ ಜಾಗದಲ್ಲಿ ದಾರಿ ಬಿಡಲಾಗದ ಹಿನ್ನೆಲೆಯಲ್ಲಿ ಪಂಚಾಯಿತಿಯವರು ಕಸವನ್ನು ತೋಟಗಾರಿಕೆ ಗೇಟ್ ಮುಂಭಾಗದಲ್ಲಿ ಹಾಕಲು ಪ್ರಾರಂಭ ಮಾಡಿದ್ದಾರೆ.
ಆ ಜಾಗದಲ್ಲಿ ಕಸದ ರಾಶಿ ಬೆಳೆಯುತ್ತಿದ್ದು ಸಮೀಪದಲ್ಲಿ ಪ್ರವಾಸಿ ಮಂದಿರ, ಪೊಲೀಲೀಸ್ ವಸತಿಗೃಹ ಹಾಗೂ ವಿದ್ಯಾರ್ಥಿನಿಲಯವಿದ್ದು, ಕಸದ ರಾಶಿಯಲ್ಲಿನ ಪ್ಲಾಸ್ಟಿಕ್, ಪೇಪರ್ ಹಾಗೂ ಇನ್ನಿತರ ವಸ್ತುಗಳು ಗಾಳಿಗೆ ಹಾರುತ್ತಿದ್ದು ಆ ಪ್ರದೇಶವೆಲ್ಲ ಗಬ್ಬುನಾರುತ್ತಿದೆ.
ಪಟ್ಟಣದ ಮುಖ್ಯಬೀದಿಯಲ್ಲಿ ಸೂಚನಾ ಫಲಕವಿದ್ದರೂ ಸಹ ಕಸ ಹಾಕುತ್ತಿದ್ದು ಕಾನೂನು ಕ್ರಮಕೈಗೊಳ್ಳಲು ಪಂಚಾಯ್ತಿ ವಿಫಲವಾಗಿದೆ ಎಂದು ದೂರಿರುವ ಅವರು, ಈ ಸಂಬಂಧ ಮಾನವಹಕ್ಕು ಆಯೋಗಕ್ಕೆ ಪತ್ರ ಬರೆಯುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.