ಕಾಂಗ್ರೆಸ್ ನಾಯಕರ ನಡುವೆ 'ಹೆರಿಗೆ' ಸಮರ
ಬೀರೂರು: ಹೆರಿಗೆ ಸಹಜವಾಗಿದ್ದರೆ ತಾಯಿ ಮಗು ಹೆಚ್ಚು ಆರೋಗವಾಗಿರಲು ಸಾಧ್ಯ. ಇದನ್ನು ಅರಿತು ನಡೆದರೆ ಪಕ್ಷ ಸಹ ಆರೋಗ್ಯವಾಗಿರುತ್ತದೆ ಹಾಗಾಗಿ ಕಾಂಗ್ರೆಸ್ ಪಕ್ಷ ಸರಿದಾರಿಯಲ್ಲಿ ನಡೆದರೆ ಉತ್ತಮ ಎಂದು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ನೂತನ ಕಾಂಗ್ರೆಸ್ ಅಧ್ಯಕ್ಷರು ನೀಡಿರುವ ಹೆರಿಗೆ ಸಂದರ್ಭದಲ್ಲಿ ನೋವಾಗುವುದು ಸಹಜ. ಆದರೆ, ಮಗುವನು ತೊಟ್ಟಿಲಿಗೆ ಹಾಕಿದ ನಂತರ ಮನೆಯಲ್ಲಿ ಹಬ್ಬದ ವಾತಾವರಣ ಬರುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಆಪರೇಶನ್ಗಿಂತ ಮುಂಚೆ ಮಗು ಪಡೆಯುವುದರಿಂದ ಇಬ್ಬರಿಗೂ ನೋವಾಗುತ್ತದೆ. ಆಗ ಮಗುವನ್ನು ಇನ್ಕ್ಯೂಬೇಟರ್ನಲ್ಲಿ ಬೆಳೆಸಬೇಕಾಗುತ್ತದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಾನು ಆಕಾಂಕ್ಷಿಯಲ್ಲ. ಅದಕ್ಕೋಸ್ಕರ ಲಾಭಿ ನಡೆಸುವ ಜಾಯಮಾನವೂ ನನ್ನದಲ್ಲ ಎಂದರು.
35 ವರ್ಷದ ರಾಜಕಾರಣದಲ್ಲಿ ರಾಜಕೀಯ ಲಾಭಕ್ಕಾಗಿ ಯಾವುದನ್ನೂ ಅನ್ಯ ಮಾರ್ಗದಿಂದ ಪಡೆದಿಲ್ಲ. ಮೊನ್ನೆ ನಡೆಸಿದ ಸಭೆಯನ್ನು ಹಗುರವಾಗಿ ತೆಗೆದುಕೊಂಡಿರುವ ಕೆಲವರು ತಮ್ಮ ಹೇಳಿಕೆಯನ್ನು ಅರ್ಥೈಸಿಕೊಳ್ಳಲಿ. ಪಕ್ಷದ ವರಿಷ್ಠರು ಸೂಕ್ತ ಉತ್ತಮ ಚಿಕಿತ್ಸೆ ಕೊಡದಿದ್ದರೆ ಹೆರಿಗೆ ಸಹಜವಾಗಿರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಅರ್ಥಮಾಡಿಕೊಳ್ಳದೇ ಜಿಲ್ಲಾಧ್ಯಕ್ಷರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಇದೇ 19 ರಂದು ಜಿಲ್ಲೆಯ ಚಿಕ್ಕಮಗಳೂರಿಗೆ ರೈಲ್ವೆ ಸೇವೆ ವಿಸ್ತರಣೆಗೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯ ಕೊಡುಗೆ. ಇದೇ ಸಂದರ್ಭದಲ್ಲಿ ಕಡೂರು ರೈಲ್ವೆ ನಿಲ್ದಾಣದ ಕಳಪೆ ಕಾಮಗಾರಿ ಸರಿಪಡಿಸುವಿಕೆ ಪಾದಾಚಾರಿ ಮೇಲು ಸೇತುವೆ ನಿರ್ಮಾಣ, ಬೀರೂರು ರೈಲ್ವೆ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವುದರ ಜೊತೆ ಕಳೆದ ರೈಲ್ವೆ ಬಜೆಟ್ಟಿನಲ್ಲಿ ಘೋಷಿಸಿದಂತೆ ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಇತರೆ ಹಿಂದುಳಿದ ವರ್ಗದ ಕಾರ್ಯದರ್ಶಿ ಯಗಟಿ ಸುರೇಶ್, ಮಹೇಶ್ವರಪ್ಪ ಮೊದಲಾದವರು ಉಪಸ್ಥಿತರಿದ್ದರು.