ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗ್ರಾಮೀಣಾಭಿವೃದ್ಧಿಗೆ ಆದ್ಯತೆ

Rashmi Kasaragodu
Updated On : 14 Nov 2013, 12:08 pm

ಕ.ಪ್ರ.ವಾರ್ತೆ ಟಿ ಕಡೂರು ಟಿ  ನ.13
ಸರ್ಕಾರಿ ಸವಲತ್ತಿಗಾಗಿ ಗ್ರಾಮೀಣ ಪ್ರದೇಶದ ಜನರು ಕಚೇರಿ ಅಲೆಯುವುದನ್ನು ತಪ್ಪಿಸಲು  ಸರ್ಕಾರವೇ ಮನೆ ಬಾಗಿಲಿಗೆ ಬರುತ್ತಿದ್ದು, ನಮ್ಮ ಜನರು ಸವಲತ್ತು ಪಡೆಯುವಲ್ಲಿ ಸಭೆಗಳಲ್ಲಿ ಭಾಗವಹಿಸುವ ಮೂಲಕ ಆಡಳಿತದಲ್ಲಿ ಪಾಲುದಾರರಾಗಬೇಕು ಎಂದು ಯಳ್ಳಂಬಳಸೆ ಜಿಪಂ ಸದಸ್ಯೆ ಶಶಿರೇಖಾ ಹೇಳಿದರು.
ಅವರು ತಾಲೂಕು ವೈ. ಮಲ್ಲಾಪುರದ ಗ್ರಾಪಂನಿಂದ ಆಯೋಜಿಸಲಾಗಿದ್ದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಾರ್ಪಾಡು ಮಾಡುವ ಮೂಲಕ ರೈತರಿಗೆ ಆದ್ಯತೆ ನೀಡುವಂತಹ ಯೋಜನೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೂಪಿಸಲಾಗಿದೆ. ಅದರಲ್ಲಿ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ಗುರುತಿಸಲಾಗಿರುವ 15 ಪ್ರಮುಖ ಮೂಲ ಸೌಕರ್ಯಗಳನ್ನು ಪ್ರತೀ ಗ್ರಾಪಂನಲ್ಲೂ ಒದಗಿಸಲು ಸರ್ಕಾರ ಯೋಜನೆಗಳ ಮಾರ್ಪಾಡು ಮಾಡಿದೆ ಎಂದು ಹೇಳಿದರು.
ಶುದ್ಧ ಕುಡಿಯುವ ನೀರು: ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದು, ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಂಡಿದೆ. ಗ್ರಾಮೀಣ ರಸ್ತೆಗಳನ್ನು ಉತ್ತಮ ಗುಣಮಟ್ಟದೊಂದಿಗೆ  ಅಭಿವೃದ್ಧಿಪಡಿಸುವುದು, ಆಟದ ಮೈದಾನ ನಿರ್ಮಾಣ, ರೈತರ ತೋಟಕ್ಕೆ ರಸ್ತೆ ನಿರ್ಮಾಣ, ಕಣಗಳ ನಿರ್ಮಾಣ,ಧಾನ್ಯಗಳ ಒಕ್ಕಲು ಕಣಗಳ ನಿರ್ಮಾಣ, ಕುರಿ, ದನಗಳ ದೊಡ್ಡಿ ನಿರ್ಮಾಣ ಸೇರಿದಂತೆ ರೈತರಿಗೆ ಆದ್ಯತೆ ಇರುವಂತಹ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಮೂಲ ಸವಲತ್ತುಗಳಿಗೂ ಆದ್ಯತೆ ನೀಡಲಾಗುತ್ತಿದೆ. ಸರ್ಕಾರದ ಇಂತಹ ಹಲವು ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಆ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಹೇಳಿದರು.
ಕಾಮಗಾರಿ ವಿವರ: ಪ್ರಾಸ್ತಾವಿಕವಾಗಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಮದ್ ಇಸ್ಮಾಯಿಲ್ ಖಾನ್ ಮಾತನಾಡಿ, 2014- 15ನೇ ಸಾಲಿಗೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೈಗೆತ್ತಿಕೊಳ್ಳಬೇಕಾಗಿರುವ ಕಾಮಗಾರಿ ವಿವರ ಮಂಡಿಸಿ, ಈಗಾಗಲೇ ಗ್ರಾಪಂ ಸದಸ್ಯರು ವಾರ್ಡ್ ಸಭೆ ನಡೆಸಿ, ಫಲಾನುಭವಿಗಳ ವೈಯಕ್ತಿಕ ಸೌಲಭ್ಯದ ಪಟ್ಟಿ  ನೀಡಿದ್ದಾರೆ. ಈ ಬಾರಿ ಪಂಚಾಯ್ತಿ ವ್ಯಾಪ್ತಿಯಲ್ಲಿ 524 ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.
ತೆಂಗು, ಅಡಕೆ, ಮಾವು, ಸಪೋಟ ಸೇರಿದಂತೆ ಪ್ರಮುಖವಾಗಿ ರು. 1.50 ಲಕ್ಷರೂ ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸಂತೋಷ್ರವರ ತೋಟದ ಮನೆವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು. ಸದಸ್ಯರು ಫಲಾನುಭವಿಗಳನ್ನು ಆಯ್ಕೆ ಮಾಡುವ ಕ್ರೀಯಾಶೀಲ ಯೋಜನೆ ರೂಪಿಸಲಾಗುವುದು ಎಂದು ವಿವರಿಸಿದರು.
ಗ್ರಾಮ ಸಭೆಯಲ್ಲಿ ಕಂದಾಯ, ಶಿಕ್ಷಣ ಇಲಾಖೆ, ಮೆಸ್ಕಾಂ, ಕೃಷಿ ಇಲಾಖೆ ಮತ್ತಿತರರ ಅಧಿಕಾರಿಗಳು ಹಾಜರಿದ್ದು, ತಮ್ಮ ಇಲಾಖೆಗಳ ಸವಲತ್ತುಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಆರ್.ದೊರೆಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ರತ್ನಮ್ಮ ತೀರ್ಥಪ್ಪ, ಕಾರ್ಯದರ್ಶಿ ಎಚ್. ಚಂದ್ರಪ್ಪ, ಗ್ರಾಪಂ ಸದಸ್ಯ ಎಂ.ಎಸ್. ಶೇಖರಪ್ಪ, ಪರಮೇಶನಾಯ್ಕ, ಎಂ.ಎಸ್. ಮಂಜುನಾಥ್,ಎಂ.ಎಸ್. ಸತೀಶ್ ಕುಮಾರ್, ಎಂ. ನಾಗರಾಜಪ್ಪ, ಚಂದ್ರಮ್ಮ, ರತ್ನಮ್ಮ, ರತ್ನಾಬಾಯಿ, ಮಾಗದರ್ಶಿ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕ ಶಿವಣ್ಣ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement