ಮನುಷ್ಯನ ನಡುವಿನ ಬಾಂಧವ್ಯಕ್ಕೆ ಧರ್ಮಕಾರ್ಯ ಪೂರಕ: ಲೋಕೇಶ್
ಕಡೂರು: ದೇವರು ಹಾಗೂ ಧರ್ಮಕಾರ್ಯಗಳು ಮನುಷ್ಯರ ನಡುವೆ ಉತ್ತಮ ಬಾಂಧವ್ಯದ ಸೇತುವೆಯಾಗುವ ಮೂಲಕ ಸಾಮರಸ್ಯದ ಅಡಿಗಲ್ಲಾಗಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್ ಹೇಳಿದರು.
ಅವರು ಕಡೂರು ತಾಲೂಕು ಯಗಟಿ ಹೋಬಳಿ ಆಲಘಟ್ಟ ಚಟ್ಟನಹಳ್ಳಿಯ ಗುರು ಮರುಳಸಿದ್ದೇಶ್ವರಸ್ವಾಮಿ ಹಾಗು ಬರ್ಮಪ್ಪಸ್ವಾಮಿ ನೂತನ ದೇವಾಲಯ ಪ್ರಾರಂಭೋತ್ಸವದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹೆಚ್ಚುತ್ತಿರುವ ಭಕ್ತಿ: ಇತ್ತೀಚಿನ ದಿನಗಳಲ್ಲಿ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಜನರಲ್ಲಿ ದೈವಭಕ್ತಿ ಹೆಚ್ಚಾಗಿರುವುದು ಸಂತಸದ ಸಂಗತಿ. ಗುರುಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ, ದೇವರಲ್ಲಿ ನಿಷ್ಠೆ, ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಈ ಗ್ರಾಮದ ಜನರು ಸೇರಿ ಗುರುಮರುಳಸಿದ್ದೇಶ್ವರ ಸ್ವಾಮಿಯವರ ದೇವಾಲಯ ಮತ್ತು ಬರ್ಮಪ್ಪ ಸ್ವಾಮಿಯವರ ನೂತನ ದೇವಾಲಯ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿರುವುದು ಅಭಿನಂದನೀಯ ಎಂದರು.
ಈ ಹಿನ್ನೆಲೆಯಲ್ಲಿ ತಮಗೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷನಾಗಿ ಹೆಚ್ಚಿನ ಜವಾಬ್ದಾರಿ ಹೊರಿಸುವ ಮೂಲಕ ಧರ್ಮ ಜಾಗೃತಿಯ ಸಂದೇಶ ಸಾರುವ ಹಾಗೂ ಸಮಾಜ ಸಂಘಟಿಸುವ ಕಾರ್ಯವನ್ನೂ ಕೂಡ ವಹಿಸಿ ತಮಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಘನಲಿಂಗ ಶಿವಾಚಾರ್ಯ ಶ್ರೀ ಮಾತನಾಡಿ, ಮರುಳಸಿದ್ದರು ನಡೆದು ಬಂದ ದಾರಿ ಮತ್ತು ಅವರು ಸಮಾಜದ ಉನ್ನತಿಗೆ ನೀಡಿರುವ ಕೊಡುಗೆ ಸ್ಮರಿಸಿ ಮಾತನಾಡಿದ ಸ್ವಾಮೀಜಿಗಳು, ಇಂದು ಧರ್ಮ ಜಾಗೃತಿ ಬಹು ಅವಶ್ಯಕವಾಗಿದೆ ಎಂದರು.
ಹಣ್ಣೆಮಠದ ಶಿವಾನಂದ ಶಿವಾಚಾರ್ಯ ಶ್ರೀ, ದೊಡ್ಡಮಠದ ಪ್ರಭುಕುಮಾರ ಶ್ರೀ, ಬೀರೂರಿನ ರಂಭಾಪುರಿ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಿಪಂ ಸದಸ್ಯೆ ಶಶಿರೇಖಾ ಎಂ.ಆರ್.ಟಿ. ಸುರೇಶ್,ಎನ್. ಓಂಕಾರಮೂರ್ತಿ, ಗ್ರಾಪಂ ಅಧ್ಯಕ್ಷರಾದ ಕೆ.ಟಿ. ಮಂಜುಳಾ ಬಸವರಾಜು, ಸಿ.ಎಂ. ಕಲ್ಲೇಶಪ್ಪ, ಸಿ.ಬಿ. ವಿರೂಪಾಕ್ಷಪ್ಪ, ಪಿ.ಕೆ. ರೇವಣ್ಣಯ್ಯ, ಎನ್.ಸಿ. ಚಂದಯ್ಯ, ಎಸ್.ಎಂ. ಪಂಚಾಕ್ಷರಯ್ಯ, ನಂಜುಂಡಾರಾಧ್ಯ ಮತ್ತು ದೇವಾಲಯದ ಅಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದರು.