ಕ್ರೀಡೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿ
ಚಿಕ್ಕಮಗಳೂರು: ಕ್ರೀಡೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಅದುದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಶಿವಕುಮಾರ್ ಕರೆ ನೀಡಿದ್ದಾರೆ.
ತಾಲೂಕಿನ ತೊಗರಿಹಂಕಲ್ ಗ್ರಾಮ ಪಂಚಾಯಿತಿಯ ಗುಡ್ಡೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಗ್ರಾಮೀಣ ಅಭಿವೃದ್ಧಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಆಟದ ಮೈದಾನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮೈದಾನಗಳನ್ನು ಅಭಿವೃದ್ಧಿಗೆ ಒತ್ತು: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಆಟದ ಮೈದಾನ ಪ್ರಮುಖ ಪಾತ್ರವಹಿಸುತ್ತದೆ. ಯುವ ಮನಸ್ಸುಗಳು ಮಾನಸಿಕ ಚಂಚಲತೆಯಿಂದ ದೂರಾಗಿ ಕಲಿಕೆಯ ಜೊತೆ ಸದೃಢದೇಹ ಕೌಶಲ್ಯ ಹೊಂದಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯವಾಗಿದ್ದು ಇದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಆಟದ ಮೈದಾನಗಳು ಹೊಂದಿರಬೇಕೆಂಬ ಚಿಂತನೆ ನಡೆಸಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಆಟದ ಮೈದಾನಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಗ್ರಾಮೀಣ ಕ್ರೀಡೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಈ ಸಂಬಂಧ ಆಟದ ಮೈದಾನ ಅಭಿವೃದ್ಧಿ ಪಡಿಸುವಾಗ ಶಿಕ್ಷಕರು ಇದಕ್ಕೆ ಪೂರಕವಾದ ಅಚ್ಚುಕಟ್ಟಾದ ಅಂಕಣಗಳನ್ನು ನಿರ್ಮಿಸಿ ಮಕ್ಕಳಿಗೆ ಸಹಕಾರಿಯಾಗುವಂತೆ ತಿಳಿಸಿದರು.
ದೇಶದ ಭವಿಷ್ಯ ಮಕ್ಕಳು: ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಮಕ್ಕಳ ಭವಿಷ್ಯ ದೇಶ ರೂಪಿಸಬೇಕು, ದೇಶದ ಭವಿಷ್ಯ ಮಕ್ಕಳು ರೂಪಿಸಬೇಕು, ಶಾಲೆಗಳಲ್ಲಿರುವ ಆಟದ ಮೈದಾನಗಳು ಸಹಸ್ರಾರು ಮಕ್ಕಳ ಭವಿಷ್ಯ ರೂಪಿಸಿದೆ, ಶಿಕ್ಷಣ ವ್ಯವಸ್ಥೆ ಯಾವ ರೀತಿ ಇರುತ್ತದೆಯೋ ಅದಕ್ಕನುಗುಣವಾಗಿ ದೇಶ ರೂಪುಗೊಳ್ಳುತ್ತದೆ. ಶಿಕ್ಷಣದಲ್ಲಿ ಸಾಧನೆ ಮಾಡಿದಷ್ಟು ಹೊಸ ಆವಿಷ್ಕಾರಗಳು ಸಾಧ್ಯವಾಗುತ್ತದೆ ಎಂದರು.
ಕಲಿಕೆ ಮತ್ತು ಸದೃಢದೇಹ ಒಂದಕ್ಕೊಂದು ಪೂರಕವಾದುದು, ಇದರಿಂದ ಐಕ್ಯತೆ ಬಾವ ಮೂಡುತ್ತದೆ, ಬಡತನ ಶಿಕ್ಷಣಕ್ಕೆ ಅಡಚಣೆಯಾಗುವುದಿಲ್ಲ ಎಂದು ಹೇಳಿದರು.
ಉದಾಸೀನತೆ ಸಮಯ ವ್ಯಯಮಾಡುತ್ತದೆ, ಲವಲವಿಕೆ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತದೆ ಎಂಬುದನ್ನು ಅರಿತು ಮಕ್ಕಳು ಶಿಕ್ಷಣವಂತರಾಗಿ ದೇಶಕ್ಕೆ ಶಕ್ತಿ ತುಂಬುವಂತೆ ಕಿವಿಮಾತು ಹೇಳಿದರು.
ಗಾಪಂ ಅಧ್ಯಕ್ಷೆ ಶ್ರೀಮತಿ ಪವಿತ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಸೀತಾ, ಮಾಜಿ ಆಧ್ಯಕ್ಷ ದಾಸರಹಳ್ಳಿ ಶಿವಕುಮಾರ್, ದೇವರಾಜ್, ಧನರಾಜ್ ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯ ತಿಮ್ಮಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಸಂಜೀವ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಂದರ್, ಚಂದ್ರಕಲಾ, ಸತ್ಯನಾರಾಯಣ, ಗಂಗಾಂಧರಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣಗೌಡ ವೇದಿಕೆಯಲ್ಲಿದ್ದರು.