ಪರಿಷ್ಕೃತ ವೇತನ ಜಾರಿಗೊಳಿಸಿ
ಚಿಕ್ಕಮಗಳೂರು: ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಪರಿಷ್ಕೃತ ಕನಿಷ್ಠ ವೇತನ ಮಂಜೂರು ಮಾಡಲು ಪೌರಾಯುಕ್ತರಿಗೆ ಆದೇಶಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರಿಗೆ ಹೊರ ಗುತ್ತಿಗೆ ನೌಕರರು ಗುರುವಾರ ಮನವಿ ಸಲ್ಲಿಸಿದರು.
ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ನಗರಸಭೆಯಿಂದ ಮೆರವಣಿಗೆ ಮೂಲಕ ಆಗಮಿಸಿದ ಗುತ್ತಿಗೆ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಬೇಡಿಕೆ ಮುಂದಿಟ್ಟರು.
ಜಿಲ್ಲಾ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಪಿ. ಗುರುಮೂರ್ತಿ ಮಾತನಾಡಿ, ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ನೀರು ಸರಬರಾಜು ಸಹಾಯಕರು, ಡಾಟಾ ಎಂಟ್ರಿ ಕೆಲಸಗಾರರು, ವಾಹನ ಚಾಲಕರು ಮತ್ತು ಕಾವಲುಗಾರರುಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.
ಹಿಂದಿನ ದರ ವೇತನ: ಸರ್ಕಾರ ಕಳೆದ ಏಪ್ರಿಲ್ 1 ರಿಂದ ಜಾರಿಗೆ ತಂದಿರುವ ಪರಿಷ್ಕೃತ ಕನಿಷ್ಠ ಕೂಲಿಯಂತೆ ವೇತನವನ್ನು ನಿಗದಿಸಿ ಗುತ್ತಿಗೆದಾರರು ನಗರಸಭೆಗೆ ಬಿಲ್ ನೀಡಿದ್ದರೂ ಪೌರಾಯುಕ್ತರು ಅದನ್ನು ಸಂದಾಯ ಮಾಡದಿರುವ ಕಾರಣ ಗುತ್ತಿಗೆದಾರರು ಕೆಲಸಗಾರರಿಗೆ ಹಿಂದಿನ ದರದಲ್ಲೇ ವೇತನ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪೌರಸೇವಾ ನೌಕರರ ಸಂಘದ ಶಾಖಾಧ್ಯಕ್ಷ ಬಿ. ಅಣ್ಣಯ್ಯ ಮಾತನಾಡಿ, ನಗರಸಭೆಯಲ್ಲಿ ಸ್ವಚ್ಛತಾ ಕೆಲಸಕ್ಕೆ ಹೊರಗುತ್ತಿಗೆಯಲ್ಲಿ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. ಕಾರ್ಮಿಕ ಇಲಾಖೆ ನಿಗದಿಸಿರುವ ಕನಿಷ್ಠ ವೇತನವನ್ನು ಲೆಕ್ಕಹಾಕಿ ಬಿಲ್ ಪಾವತಿಸುತ್ತಿಲ್ಲ.
ಆದರೆ ತುಮಕೂರು ನಗರಸಭೆಯಲ್ಲಿ ಇದೇ ರೀತಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ ಸರ್ಕಾರ ನಿಗದಿಪಡಿಸಿದ ಪರಿಷ್ಕೃತ ಕನಿಷ್ಠ ವೇತನ ಬಿಲ್ ಪಾವತಿಯಾಗುತ್ತಿದೆ ಎಂದು ಹೇಳಿದರು.
ಆದೇಶ ಪಾಲಿಸಿ: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಸರ್ಕಾರ ಕಾರ್ಮಿಕರಿಗೆ ನೀಡಿದ ಸೌಲಭ್ಯವನ್ನು 2 ತಿಂಗಳಾದರೂ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಕೂಡಲೆ ಪೌರಾಯುಕ್ತರಿಗೆ ಕಾರ್ಮಿಕರ ಸೌಲಭ್ಯವನ್ನು ತಕ್ಷಣ ಪೂರೈಸುವಂತೆ ಕಾರ್ಯಾದೇಶ ನೀಡಿ ಸ್ಪಂದಿಸುವ ಜೊತೆ ಹೊರಗುತ್ತಿಗೆ ಕೆಲಸಗಾರರ ಪರಿಷ್ಕೃತ ಕನಿಷ್ಠ ವೇತನ ನೀಡುವ ಬಗ್ಗೆ ಸರ್ಕಾರದ ಆದೇಶ ಪಾಲಿಸುವಂತೆ ಸೂಚಿಸಿದರು. ಎನ್. ಅಣ್ಣಯ್ಯ, ಎನ್. ನಾಗರಾಜು, ಸುನಿಲ್ಕುಮಾರ್, ಶ್ರೀನಿವಾಸ್, ಕೃಷ್ಣಮೂರ್ತಿ, ಲೋಹಿತ್, ಎನ್. ಗಾಯತ್ರಿ, ರಾಧಾ, ನೇತ್ರಾವತಿ, ಕೃಷ್ಣ ಹಾಜರಿದ್ದರು.