ಭಾಷೆ, ಜಾತಿ, ಧರ್ಮದ ನಡುವೆ ಸಂಬಂಧವಿಲ್ಲ
ಚಿಕ್ಕಮಗಳೂರು: ಭಾಷೆ, ಜಾತಿ ಮತ್ತು ಧರ್ಮದ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಹೇಳಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ಶಾಂತಿ ಪ್ರಕಾಶನದ ರಜತ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಲಾಗಿದ್ದ ಶಾಂತಿಗಾಗಿ ಸಾಹಿತ್ಯ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ, ಜಾತಿ ಮತ್ತು ಧರ್ಮದ ನಡುವೆ ತಳುಕು ಹಾಕುವವರು ಎಲ್ಲಾ ಭಾಷೆಗಳ ವೈರಿಗಳು ಎಂದು ಗುಡುಗಿದರು.
ಅಕ್ಷರದ ಸೃಷ್ಟಿಯಿಂದ ಕ್ರಾಂತಿ ಅಸಾಧ್ಯ. ಓದುಗನಲ್ಲಿ ಹೊಸ ಸಾಧ್ಯತೆ ನಿರ್ಮಾಣ ಮಾಡಿ ಅವನನ್ನು ಮಂಥನಕ್ಕೆ ಒಳಪಡಿಸಿ ವಾಸ್ತವ ಜ್ಞಾನ ಮುಟ್ಟಿಸಿ ಬದಲಾವಣೆಯತ್ತ ಚಿಂತನೆ ಮೂಡಿಸುವುದರಲ್ಲಿ ಸಾಹಿತ್ಯದ ಸಾರ್ಥಕತೆ ಇದೆ ಎಂದರು.
ಸಮಾನತೆ ಇಲ್ಲ: ಸಮಾಜದಲ್ಲಿ ವಾಸ್ತವವಾಗಿ ಸಮಾನತೆ ಇಲ್ಲ. ಅನೇಕ ಸಮಸ್ಯೆಗಳಿಗೆ ಸಂಘಟಿತ ಪ್ರಯತ್ನದಿಂದ ಬದಲಾವಣೆ ಸಾಧ್ಯ. ಇದಕ್ಕೆ ಸಾಹಿತ್ಯ ಒಂದು ಪರಿಣಾಮಕಾರಿ ಮಾಧ್ಯಮ. ಮೌಲ್ಯಗಳಲ್ಲಿ ನಂಬಿಕೆ ಇಡುವುದರಿಂದ ಅಕ್ಷರದ ಆಯುಧ ಬಳಸಿ ಗುರಿ ತಲುಪಲು ಸಾಧ್ಯ ಎಂದರು.
ಸಾಹಿತಿ ಸಮಾಜದ ಒಂದು ಭಾಗ. ಭಾಷೆ ಸಂವಹನದ ಮಾಧ್ಯಮ. ಸಮಾಜದಲ್ಲಿ ಅನುಭವವಗಳೇ ಸಾಹಿತ್ಯಕ್ಕೆ ವಸ್ತು. ಸಮಾಜವೇ ಸಾಹಿತ್ಯದ ಗುರಿಯೂ ಹೌದು.
ಹೀಗಾಗಿ ಮೌಲ್ಯಗಳ ದಿಕ್ಸೂಚಿ ಇದ್ದರೆ ಸಾಹಿತ್ಯ ಜನಮುಖಿ, ಮನುಷ್ಯಮುಖಿ ಆಗಿರಲು ಸಾಧ್ಯ. ಆದರ್ಶದ ಮಿತಿಯೊಳಗೆ ಬರೆಯುವುದು ಸಾಹಿತ್ಯದ ಪ್ರಮುಖ್ಯತೆ ಎಂದ ಚಂಪಾ, ಬದುಕಿನ ಬಗ್ಗೆ ಕಾಳಜಿವಹಿಸಿ ಅಸಂಗತ ವಸ್ತು ತಮ್ಮದಾಗಿಸಿಕೊಂಡವರು ಮಾತ್ರ ನಿಜವಾಗಿ ಬದುಕಲು ಸಾಧ್ಯ. ಕನ್ನಡ ಸಾಹಿತ್ಯವಾಹಿನಿ ಇದನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು.
ಉರ್ದು ಭಾಷೆ ಹೈದರಾಬಾದ್ ಕರ್ನಾಟಕದಲ್ಲಿ ಜನರ ನೆಲದ ಭಾಷೆ. ಶಾಂತರಸ, ಸಿದ್ದಯ್ಯಪುರಾಣಿಕ, ವೀರೇಂದ್ರ ಪಾಟೀಲ್ ಮತ್ತಿತರರ ಉರ್ದು ಜ್ಞಾನ ಪ್ರಶ್ನಾತೀತ. ಸಮಷ್ಠಿಯ ಸಂವೇದನೆ ಕೆಲಸ ಸಾಹಿತ್ಯದಿಂದಾಗಲಿ, ಶಾಂತಿ ನಮ್ಮೆಲ್ಲರ ಗುರಿ. ಗಮ್ಯಮುಟ್ಟಲು ಇರಬೇಕಾದ ಅನೇಕ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು ಸಮಾಜದಲ್ಲಿ ದೌರ್ಜನ್ಯ, ತಾರತಮ್ಯ, ಅಪಮಾನ, ಕೊಲೆ ನಡೆಯುತ್ತಿವೆ. ಬದುಕಿನ ಈ ವಾಸ್ತವ ಅರ್ಥಮಾಡಿಕೊಂಡು ವಿಶ್ಲೇಷಿಸಿ ಇವೆನ್ನೆಲ್ಲಾ ಇಲ್ಲದಂತೆ ಮಾಡಲು ಲೇಖಕರು ತಮ್ಮದೇ ಆಯುಧ ಬಳಸಬೇಕು ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಾ. ಶ್ರೀಕಂಠ ಕೂಡಿಗೆ ಮಾತನಾಡಿ, ಹಿಂಸೆ ಕ್ರೌರ್ಯಕ್ಕಾಗಿ ಸಾಹಿತ್ಯ ಸೃಷ್ಟಿಸುವುದು ಮನುಷ್ಯತ್ವಕ್ಕೆ ವಿರುದ್ಧವಾದುದು, ಧರ್ಮ ಎತ್ತಿ ಹಿಡಿಯುವ ಭರದಲ್ಲಿ ಅನೇಕ ತಪ್ಪುಗಳು ಸಾಹಿತಿಗಳಿಂದಾಗುತ್ತಿದೆ ಎಂದರು.
ಕೋಮುವಾದಿಗಳ ಹೆಚ್ಚಳ: ಭಯೋತ್ಪಾದನೆಗೆ ಹಿಂದೂ, ಮುಸ್ಲಿಂ ಎಂಬುದಿಲ್ಲ. ಸೂಫಿ, ಅವಧೂತ ಪರಂಪರೆ ದೇಶದ ಕೋಮು ಸೌಹಾರ್ಧತೆಯನ್ನು ಹಿಡಿದಿಟ್ಟಿದೆ. ಶಾಂತಿಗಿಂತ ಮತೀಯ ಶೋಭೆಗಾಗಿ ಪೈಪೋಟಿ ಕನ್ನಡ ಸಾಹಿತ್ಯದಲ್ಲಿ ಗೊತ್ತಾಗುತ್ತಿದೆ. ಅಕ್ಷರಸ್ಥ ಜಾತೀವಾದಿ, ಕೋಮುವಾದಿ, ಮೂಢನಂಬಿಕಸ್ಥಗುಂಪುಗಳು ಸ್ವಾತ್ರಂತ್ರ್ಯ ನಂತರ ಬೆಳೆಯುತ್ತಿರುವ ಬಗ್ಗೆ ವಿಷಾದಿಸಿದರು.
ವೈಜ್ಞಾನಿಕ ಮನೋಭಾವನೆಯ ಬುದ್ಧಿ ಪ್ರಚೋದನೆ ಶಿಕ್ಷಣದಲ್ಲಿಲ್ಲ. ದೇಶದ ಎಲ್ಲ ವಿಜ್ಞಾನಿಗಳೂ ಮೂಢನಂಬಿಕಸ್ಥರೇ. ಮಂಗಳನ ಅಂಗಳಕ್ಕೆ ಹೊರಟ ನೌಕೆಯ ಪ್ರತಿಕೃತಿ ತಿಮ್ಮಪ್ಪನ ಮುಂದಿಟ್ಟು ಪೂಜಿಸಿದರು.
ಎಲ್ಲ ಧರ್ಮದಲ್ಲೂ ಇರುವ ಮೌಢ್ಯ ದಾಟಬೇಕು. ಮೂಢನಂಬಿಕೆ ನಿಷೇಧದ ಬಗ್ಗೆ ಗಮನಹರಿಸಬೇಕೆಂದರು.
ಸಾಹಿತಿ ಭಾನು ಮುಷ್ತಾಕ್ ಮಾತನಾಡಿ, ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ಸಂವಾದಿಯಾದಾಗ ಸಾಹಿತ್ಯದ ಪ್ರಸ್ತುತತೆ ಇರುತ್ತದೆ. ದೇವ ಭಯಕ್ಕಿಂತ ಸೃಷ್ಟಿಕರ್ತನೊಂದಿಗಿನ ಪ್ರೀತಿಯ ಸಂಬಂಧ ಪ್ರಮುಖವಾಗಬೇಕು ಎಂದರು.
ನಾಯಕತ್ವದ ಕೊರತೆ: ಮುಸ್ಲಿಂ ಸಮಾಜ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಅನಾಯಕತ್ವದಿಂದ ಬಳಲುತ್ತಿದೆ. ಅನೇಕ ಸುಳ್ಳು ಆರೋಪಗಳನ್ನು ಅನಿವಾರ್ಯವಾಗಿ ಕೇಳಿಸಿಕೊಂಡು ಬರುತ್ತಿದೆ. ಶಾದಿಭಾಗ್ಯ ಕಂಟ್ರ್ಯಾಕ್ಟರ್ ಬದುಕಿಸುವ ಯೋಜನೆ ಎಂದು ಟೀಕಿಸಿದ ಭಾನು ಮುಷ್ತಾಕ್, ವಿದ್ಯೆ, ಉದ್ಯೋಗ, ತರಬೇತಿಯ ಮೂಲಕ ಸ್ವಾಭಿಮಾನದಿಂದ ಗೌರವಪೂರ್ಣವಾಗಿ ಬದುಕನ್ನು ಕಟ್ಟಿಕೊಳ್ಳಲು ನೆರವು ನೀಡುವುದು ಮುಖ್ಯ. ಇತ್ತೀಚೆಗೆ ಶಾದಿಭಾಗ್ಯವನ್ನು ಕಲ್ಯಾಣಭಾಗ್ಯವೆಂದು ಬದಲಾಯಿಸಬೇಕೆಂಬ ಕೂಗು ಕೇಳಿ ಬರುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳೂರಿನ ಅಬ್ದುಲ್ ಖಾದರ್ ಕುಕ್ಕಿಲ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧಕ್ಷ ಹಫೀಸ್ ಅನ್ವರ್ ವೇದಿಕೆಯಲ್ಲಿದ್ದರು. ಸಂಚಾಲಕ ಗಫಾರ್ ಬೇಗ್ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಮೊಹಮ್ಮದ್ ಸ್ಹಾಲಿ ವಂದಿಸಿದರು.