ರಾ.ಹೆ. ಅಭಿವೃದ್ಧಿಗೆ ಕೇಂದ್ರ ಒಪ್ಪಿಗೆ: ಹೆಗ್ಡೆ
ತರೀಕೆರೆ: 25 ಕೋಟಿಯಲ್ಲಿ ಬೀರೂರು ತರೀಕೆರೆ ನಡುವಿನ 17 ಕಿಮೀ ರಾ.ಹೆ. ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಅವರು, ಸಮೀಪದ ನಾರಾಣಾಪುರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಬೀರೂರಿನಿಂದ ರಾ.ಹೆ. 140ನೇ ಕೀ.ಮೀ ನಿಂದ 167ನೇ ಕಿ.ಮೀ ವರೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು. ಮುಂದಿನ ಲೋಕಸಭಾ ಚುನಾವಣೆಗೆ ತಾವು ಸಂಸತ್ ಕ್ಷೇತ್ರದಾದ್ಯಂತ ಕೈಗೊಳ್ಳುತ್ತಿರುವ ಅಭಿವೃದ್ಧಿಯೇ ಆಧಾರ ಎಂದು ತಿಳಿಸಿದ ಅವರು ನರೇಂದ್ರ ಮೋದಿ ಅಲೆ ಕೇವಲ ಮಾಧ್ಯಮಗಲ ಸೃಷ್ಟಿ ಎಂದು ತಿಳಿಸಿದರು. ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ತರೀಕೆರೆ ಪಟ್ಟಣದ ರಾ.ಹೆ. ವ್ಯಾಪ್ತಿಯಲ್ಲಿ, ಡಿವೈಡರ್ ಅಳವಡಿಸಿ ಚತುಷ್ಪಥ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ, ವಿದ್ಯುತ್ ಕಂಬಗಳ ಸ್ಥಳಾಂತರ, ಫುಟ್ ಪಾತ್ ನಿರ್ಮಾಣ ಇತ್ಯಾದಿಗಳನ್ನು ಕೈಗೊಂಡು ಹೆದ್ದಾರಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು. ಈ ಬಗ್ಗೆ ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ರಸ್ತೆ ಅಭಿವೃದ್ಧಿ ಅಂದಾಜು ಪಟ್ಟಿಯ ಪ್ರಸ್ತಾವನೆ ಕಳುಹಿಸಲಾಗಿದ್ದು, ತಾವು ಸಂಸತ್ ಸದಸ್ಯರೊಡಗೂಡಿ ಅಂದಾಜು ಪಟ್ಟಿಗೆ ಶೀಘ್ರದಲ್ಲೇ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು. ಅಮೃತಮಹಲ್ ಅವ್ಯವಹಾರ ತನಿಖೆಗೆ ಸರ್ಕಾರ ತನಿಖಾ ಸಮಿತಿ ರಚಿಸಿದೆ ಎಂದರು.