ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Mainashree
Updated On : 15 Nov 2013, 3:29 am

ಇಂದು ಪ್ರತಿಭಟನೆ
ಚಿಕ್ಕಮಗಳೂರು: ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ನರೇಂದ್ರ ಮೋದಿ ತೊಲಗಿಸಿ ಭಾರತ ಉಳಿಸಿ ಎಂಬ ಪ್ರತಿಭಟನೆಯನ್ನು ಶುಕ್ರವಾರ ಹಮ್ಮಿಕೊಂಡಿದೆ. ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2002ರಲ್ಲಿ ನಡೆದ ನರಮೇಧದ ಬಗ್ಗೆ ತನಿಖೆಯಾಗಬೇಕು. ಈ ಪ್ರಕರಣದ ಆರೋಪಿಯಾಗಿರುವ ನರೇಂದ್ರ ಮೋದಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ತುಳಸೀ ಪೂಜೆ
ತರೀಕೆರೆ: ಮಂಗಳಕರವಾದ ತುಳಸೀ ವಿವಾಹ ಸಂಕೇತವಾದ ಉತ್ಥಾನ ದ್ವಾದಶೀ ತುಳಸೀ ಪೂಜೆಯನ್ನು ಪಟ್ಟಣದ ಎಲ್ಲಡೆ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ವೃಂದಾವನವನ್ನು ತಳಿರು ತೋರಣಗಳಿಂದ, ಮಾವು, ನೆಲ್ಲಿಕಾಯಿ ಮತ್ತು ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಿ ವಿಷ್ಣು, ತುಳಸೀ ಅಷ್ಟೋತ್ತರ, ಸಹಸ್ರನಾಮ, ದೇವರನಾಮ, ಭಜನೆಗಳನ್ನು ಪಠಿಸಿ ಭಗವಂತನನ್ನು ಉತ್ಥಾನಗೊಳಿಸುವ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು.ಮಕ್ಕಳು ಪಟಾಕಿ ಸಿಡಿಸಿ ಆನಂದಿಸಿದರು.
17ರಂದು ಲಕ್ಷ ದೀಪೋತ್ಸವ
ಶೃಂಗೇರಿ: ಇಲ್ಲಿನ ಶಾರದಾಪೀಠದಲ್ಲಿ ನ.17 ರಂದು ಲಕ್ಷದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಬೆಟ್ಟದ ಮಲಹಾನಿಕರೇಶ್ವರ ದೇವಾಲಯದಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿದೆ ಆರಂಭವಾಗಲಿದೆ.
ಅಂದು ಬೆಳಗ್ಗೆ ರುದ್ರಹೋಮ ಸಂಕಲ್ಪ ನೆರವೇರಲಿದ್ದು ಮಧ್ಯಾಹ್ನ ಭಾರತೀ ತೀರ್ಥರ ಸಮ್ಮುಖದಲ್ಲಿ ಪೂರ್ಣಾಹುತಿ ನಡೆಯಲಿದೆ. ಸಂಜೆ 6ರಿಂದ ಸಾಂಸ್ಕೃತಿಕ ವೈಭವ ಆರಂಭವಾಗಲಿದೆ. ನಂತರ ಬೆಟ್ಟದ ಮಲಹಾನಿಕರೇಶ್ವರ ದೇವಾಲಯದಲ್ಲಿ ಪರಕಾಳಿ ಸೇವೆಯ ನಂತರ ಶ್ರೀಗಳು ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ದೇವರ ಉತ್ಸವದ ನಂತರ ಶಾರದಾ ಪೀಠದಲ್ಲಿ ದೀಪಾರಾಧನೆ, ತುಂಗಾ ತೀರದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ, ತುಂಗಾ ನದಿಯಲ್ಲಿ ತೆಪ್ಪೋತ್ಸವ ಜರುಗಲಿದೆ.
ಲಕ್ಷದೀಪೋತ್ಸವದ ಅಂಗವಾಗಿ ಸಾಂಸ್ಕೃತಿಕ ವೈಭವ ನಡೆಯಲಿದ್ದು, ವಿದುಷಿ  ನರಸಿಂಹ ಪ್ರಸಾದ್ ರವರಿಂದ ಮೆಂಡೋಲಿನ್ ವಾದನ, ಭಾರ್ಗವ ತಂಡದವರಿಂದ ನೃತ್ಯ ರೂಪಕ, ಜೆಸಿಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಹಾಗೂ ಬೃಹತ್ ರಂಗೋಲಿ ಪ್ರದರ್ಶನ ಆಯೋಜಿಸಲಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಪ್ರಹರ್ಷಿತ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ
ತರೀಕೆರೆ: ಪ್ರಹರ್ಷಿತಾ ವಿದ್ಯಾಸಂಸ್ಥೆ ವತಿಯಿಂದ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಏರ್ಪಡಿಸಲಾಗಿತ್ತು. ಎಲ್ಲಾ ಕಾರ್ಯಕ್ರಮಗಳನ್ನು ಮಕ್ಕಳೇ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಕು. ಭಾವನ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜವಹರಲಾಲ್ ನೆಹರು ಅವರಿಗೆ ಮಕ್ಕಳೆಂದರೆ ಬಹು ಪ್ರೀತಿ, ಅದಕ್ಕಾಗಿ ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದರು. ಕು. ಶ್ರೀವರ್ಧನ್ ಮಾತನಾಡಿ, ನೆಹರೂ ಪ್ರಧಾನಮಂತ್ರಿಗಳಾಗಿ ಆಡಳಿತ ನಡೆಸಿದ ಬಗ್ಗೆ ಮಾತನಾಡಿದರು. ಮಕ್ಕಳು ವಿವಿಧ ವೇಷಭೂಷಣ ಧರಿಸಿ ತಮ್ಮ ಕೌಶಲ್ಯ ತೋರಿಸಿದರು. ಚೈತ್ರಾ, ಸ್ನೇಹ, ದಿವ್ಯ, ಸೋನಿಕಾ, ಐಶ್ವರ್ಯ, ಗಗನ, ಅಕ್ಷಯ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ, ಆಡಳಿತಾಧಿಕಾರಿ ಟಿ.ಆರ್. ರುದ್ರಯ್ಯ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement