ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

19 ರಂದು ರೈಲು ಸಂಚಾರ ಲೋಕಾರ್ಪಣೆ

Rashmi Kasaragodu
Updated On : 16 Nov 2013, 11:33 am


ಆರ್. ತಾರಾನಾಥ್
ಚಿಕ್ಕಮಗಳೂರು: ಚಿಕ್ಕಮಗಳೂರಿಗೆ ರೈಲು ಬರಬೇಕೆಂಬ 8 ದಶಕದ ಕನಸು ನನಸಾಗಲು ಇನ್ನು ನಾಲ್ಕೇ ದಿನ ಬಾಕಿ ಇದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಜನ್ಮ ದಿನಾಚರಣೆ (ನ.19) ದಿನದಂದು ಕಡೂರು- ಚಿಕ್ಕಮಗಳೂರು ರೈಲು ಲೋಕಾರ್ಪಣೆಗೊಳ್ಳಲಿದೆ.
ಕೇಂದ್ರದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ನೂತನ ಮಾರ್ಗವನ್ನು ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.
ಚಿಕ್ಕಮಗಳೂರಿಗೆ ರೈಲು ಬಿಡಬೇಕೆಂಬುದು ಇತ್ತೀಚಿನ ವರ್ಷದ ಕನಸಲ್ಲ, 1926ರಲ್ಲಿ ಚಿಕ್ಕಮಗಳೂರು ಜಿಲ್ಲಾ ಮಂಡಳಿ ರೈಲ್ವೆ ಸೆಸ್ ಆಗಿ 5.50 ಲಕ್ಷ ಸಂಗ್ರಹಿಸಿ ರೈಲ್ವೆ ಮಾರ್ಗದ ಬಗ್ಗೆ ಸರ್ವೇಕ್ಷಣಾ ಕಾರ್ಯ ನಡೆಸಿದ ಬ್ರಿಟಿಷ್ ಸರ್ಕಾರ ಈ ಯೋಜನೆಯಿಂದ ಆರ್ಥಿಕವಾಗಿ ಯಾವುದೇ ಲಾಭವಿಲ್ಲವೆಂದು ಕೈಬಿಟ್ಟಿತ್ತು.
ತದನಂತರ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿಯವರು 1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಜೀವ ಬಂದಿತು. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಜನಪ್ರತಿನಿಧಿಗಳ ಪ್ರಯತ್ನದಿಂದಾಗಿ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಿಂದಾಗಿ 319 ಕೋಟಿ ವೆಚ್ಚದಲ್ಲಿ ಈ ರೈಲು ಮಾರ್ಗ ಸಿದ್ದಗೊಂಡಿದೆ. ಇದೀಗ ಜಿಲ್ಲೆಯ ಜನತೆ ರೈಲು ಸಂಚಾರವನ್ನು ಎದುರು ನೋಡುತ್ತಿದ್ದಾರೆ. ಆದರೆ, ಈ ರೈಲು ಸಂಚಾರದಿಂದ ಜಿಲ್ಲೆಯ ಜನತೆಗೆ ಪ್ರಯೋಜನವಾಗಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಎರಡು ಬಾರಿ ಮಾತ್ರ: ರೈಲು ಸಂಚಾರ ಉದ್ಘಾಟನೆಯಾದ ದಿನದಿಂದಲೇ ಚಿಕ್ಕಮಗಳೂರು- ಶಿವಮೊಗ್ಗ ನಡುವೆ ಪ್ಯಾಸೆಂಜರ್ ರೈಲು ಓಡಾಡಲಿದೆ.
ಅಂದರೆ ದಿನದಲ್ಲಿ ಎರಡು ಬಾರಿ ಮಾತ್ರ ಸಂಚರಿಸಲಿದೆ. ಬೆಳಿಗ್ಗೆ 6.30ಕ್ಕೆ ಚಿಕ್ಕಮಗಳೂರು ಬಿಡುವ ರೈಲು, ಕಣಿವೆಹಳ್ಳಿ, ಸಖರಾಯಪಟ್ಟಣ, ಬಿಸಲೇಹಳ್ಳಿ, ಕಡೂರು, ಬೀರೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಬೆಳಿಗ್ಗೆ 9.30ಕ್ಕೆ ತಲುಪಲಿದೆ. ಅದೇ ದಿನ ಸಂಜೆ 6.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ ರೈಲು ಇದೇ ಮಾರ್ಗವಾಗಿ ರಾತ್ರಿ 9.15ಕ್ಕೆ ಚಿಕ್ಕಮಗಳೂರಿಗೆ ಬರಲಿದೆ. ಇದರಿಂದ ಶಿವಮೊಗ್ಗ- ಚಿಕ್ಕಮಗಳೂರು ಮಾರ್ಗದಲ್ಲಿ ಓಡಾಡುವವರಿಗೆ ಅನುಕೂಲವಾಗಲಿದೆ.
ದಿನದಲ್ಲಿ ಎರಡು ಬಾರಿ ಸಂಚರಿಸುವ ಈ ರೈಲಿನಿಂದ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವೇನೂ ಆಗುವುದಿಲ್ಲ. ಕಾರಣ, ಬೀರೂರು ಜಂಕ್ಷನ್ಗೆ ಬೇರೆ ಕಡೆಗಳಿಂದ ಬರುವ ರೈಲುಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ.
ಕಾರಣ, ಬೆಳಿಗ್ಗೆ 6.30ಕ್ಕೆ ಚಿಕ್ಕಮಗಳೂರಿನಿಂದ ಹೊರಡುವ ರೈಲು 8.05ಕ್ಕೆ ಬೀರೂರಿಗೆ ತಲುಪಲಿದೆ. ಅಲ್ಲಿ ತಕ್ಷಣಕ್ಕೆ ಬೇರೆ ಊರುಗಳಿಗೆ ಹೋಗಲು ಟ್ರೈನ್ ವ್ಯವಸ್ಥೆ ಇಲ್ಲ. ಬದಲಿಗೆ 9.15ವರೆಗೆ ಕಾಯಬೇಕು. ಬೀರೂರು ಜಂಕ್ಷನ್ಗೆ 9.15ಕ್ಕೆ ಶಿವಮೊಗ್ಗ- ಮೈಸೂರು ಪ್ಯಾಸೆಂಜರ್ ರೈಲು, ಹುಬ್ಬಳ್ಳಿ- ಬೆಂಗಳೂರು ಜನ ಶತಾಬ್ದಿ, 9.50ಕ್ಕೆ ಮೈಸೂರು- ಶಿವಮೊಗ್ಗ  ಇಂಟರ್ ಸಿಟಿ, 10.10ಕ್ಕೆ ಚಾಲುಕ್ಯ ಎಕ್ಸ್ಪ್ರೆಸ್ ರೈಲುಗಳು ಬರುವುದರಿಂದ ಚಿಕ್ಕಮಗಳೂರಿನಿಂದ ಬೆಳಿಗ್ಗೆ 6.30ರ ಟ್ರೈನ್ಗೆ ಹೋಗುವವರಿಗೆ ಅನುಕೂಲವಾಗಲಿದೆ.
ಬೆಳಿಗ್ಗೆ 11 ಗಂಟೆಗೆ ಬೀರೂರಿನಿಂದ ಚಿಕ್ಕಮಗಳೂರಿಗೆ ಟ್ರೈನ್ ಬಿಟ್ಟರೆ ಈ ನಾಲ್ಕು ರೈಲುಗಳಲ್ಲಿ ಬರುವ ಚಿಕ್ಕಮಗಳೂರಿಗೆ ಹೋಗುವವರಿಗೆ ಪ್ರಯೋಜನವಾಗಲಿದ್ದು, 11 ಗಂಟೆಗೆ ಬೀರೂರು ಬಿಡುವ ಟ್ರೈನ್ 12.30ಕ್ಕೆ ಚಿಕ್ಕಮಗಳೂರಿಗೆ ಬಂದು, ಇಲ್ಲಿಂದ ಮಧ್ಯಾಹ್ನ 2 ಗಂಟೆಗೆ ಹೊರಟು 3.30ಕ್ಕೆ ಬೀರೂರಿಗೆ ಬಂದರೆ ದಾವಣಗೆರೆ, ಶಿವಮೊಗ್ಗ ಹಾಗೂ ಚಾಲುಕ್ಯ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗಿದೆ.
ಆದರೆ, ಸಂಜೆ ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಬರುವ ರಾಲಿಗೆ ಸಂಪರ್ಕದ ರೈಲುಗಳು ಸಿಗುವುದಿಲ್ಲ. ಕಾರಣ, ಬೀರೂರಿಗೆ ಸಂಜೆ 7.45ಕ್ಕೆ ರೈಲು ಬರಲಿದೆ. ಆ ಸಮಯಕ್ಕೆ ಬೀರೂರಿಗೆ ಬೇರೆ ಕಡೆಯಿಂದ ಯಾವುದೇ ಟ್ರೈನ್ ಬಂದಿರುವುದಿಲ್ಲ. ಈ ರೈಲು 4 ಗಂಟೆಗೆ ಬೀರೂರಿಗೆ ಬಂದಿದ್ದೆಯಾದರೆ ಬೆಂಗಳೂರು- ಹುಬ್ಬಳ್ಳಿ ಇಂಟರ್ ಸಿಟಿ, ಶಿವಮೊಗ್ಗ- ಬೆಂಗಳೂರು, ಹುಬ್ಬಳ್ಳಿ- ಬೆಂಗಳೂರು ಪ್ಯಾಸೆಂಜರ್ ರೈಲು, ಸಂಜೆ 5 ಗಂಟೆಗೆ ಚಾಲುಕ್ಯ ಎಕ್ಸ್ಪ್ರೆಸ್, 5.40ಕ್ಕೆ ಬರಲಿರುವ ಶಿವಮೊಗ್ಗ- ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವವರು ಚಿಕ್ಕಮಗಳೂರಿಗೆ ಬರಲು ಅನುಕೂಲವಾಗಲಿದೆ.
ಈಗ ನಿಗಧಿಪಡಿಸಿರುವ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 6.30ಕ್ಕೆ ಹೊರಡುವ ರೈಲಿನಿಂದ ರಾಜ್ಯದ ಬೇರೆ ಕಡೆಗೆ ಹೋಗುವವರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ. ಆದರೆ, ರಾತ್ರಿ 7.45ಕ್ಕೆ ಬೀರೂರು ಬಿಟ್ಟು 9.15ಕ್ಕೆ ಚಿಕ್ಕಮಗಳೂರಿಗೆ ಬರುವುದರಿಂದ ದೂರದೂರಿನಿಂದ ಬರುವ ಪ್ರಯಾಣಿಕರಿಗೆ ಪ್ರಯೋಜನವಾಗಲಾರದು. ಈಗ ನಿಗದಿಪಡಿಸಿರುವ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
10 ಮಾತ್ರ: ಚಿಕ್ಕಮಗಳೂರಿನಿಂದ ಕಡೂರಿನ ನಡುವಿನ ಅಂತರ 45 ಕಿ.ಮೀ. ರೈಲ್ವೆ ಇಲಾಖೆ 40 ಕಿ.ಮಿ. ಪ್ರಯಾಣಕ್ಕೆ ನಿಗದಿಪಡಿಸಿರುವ ದರ 10. ಬೆಳಿಗ್ಗೆ ಹೊರಡಲಿರುವ ರೈಲಿನಲ್ಲಿ ಪ್ರಯಾಣಿಸಿದರೆ ಬೀರೂರು ಜಂಕ್ಷನ್ನಿಂದ ಬೇರೆಡೆಗೆ ಪ್ರಯಾಣಿಸಲು ಅನುಕೂಲವಿರುವುದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಬಹುದು. ಆದರೆ, ರಾತ್ರಿ ವೇಳೆಯಲ್ಲಿ ಈ ರೈಲು ಪ್ರಯಾಣಿಕರ ಕೊರತೆಯನ್ನು ಎದುರಿಸಬೇಕಾಗುತ್ತದೆ. ಆಗ, ನಷ್ಟವನ್ನು ಅನುಭವಿಸಬೇಕಾದ ಸಾಧ್ಯತೆ ಇದೆ.
ಸರಕು ಸಾಗಾಣಿಕೆಯಿಂದ ಆದಾಯದ ನಷ್ಟವನ್ನು ಸರಿದೂಗಿಸಲು ರೈಲು ಪ್ರಯಾಣಿಕರ ಟಿಕೆಟ್ ದರದ ಮೇಲೆ ಅವಲಂಭಿತವಾಗಿರಬೇಕಾಗುತ್ತದೆ. ಈ ನಷ್ಟವನ್ನು ತುಂಬಲು ರೈಲ್ವೆ ಇಲಾಖೆ, ಬೀರೂರಿನಿಂದ ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಹೊರಡುವ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು. ಇದರಿಂದ ಚಿಕ್ಕಮಗಳೂರಿಗೆ ಮಾತ್ರವಲ್ಲ, ರಾಜ್ಯದ ವಿವಿಧೆಡೆಗಳಿಂದ ಧರ್ಮಸ್ಥಳ ಸೇರಿದಂತೆ ಜಿಲ್ಲೆಯ ಇತರೆ ಧಾರ್ಮಿಕ ಕೇಂದ್ರಗಳಿಗೆ ಹಾಗೂ ಪ್ರವಾಸಿಗರಿಗೆ ಹೋಗಿ ಬರಲು ಅನುಕೂಲವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement