ತೆರವು ಮಾಡಿದ ಕುಟುಂಬಕ್ಕೆ ಸಕಲ ಸೌಲಭ್ಯ: ಶ್ರೀನಿವಾಸ್
ನರಸಿಂಹರಾಜಪುರ: ಪ್ರವಾಸಿ ಮಂದಿರ ಸಮೀಪ ಇರುವ ಕೋಟೆ ಮಾರಿಕಾಂಬಾ ದೇವಾಲಯದ ಆವರಣದಲ್ಲಿ ಇದ್ದ ಮನೆಗಳನ್ನು ತೆರವು ಮಾಡಿದ 4 ಕುಟುಂಬದವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ನೀಡಲಾಗುವುದು ಎಂದು ವಿಪ ಸದಸ್ಯ ಎಂ. ಶ್ರೀನಿವಾಸ್ ಭರವಸೆ ನೀಡಿದರು.
ಅವರು ಇತ್ತೀಚೆಗೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕೋಟೆ ಮಾರಿಕಾಂಬಾ ದೇವಸ್ಥಾನ ಆವರಣದಲ್ಲಿದ್ದು, ಈಗ ತೆರವುಗೊಳಿಸದ ಸೆಲ್ವ ಯಾನೆ ಮುನೀರ್, ನಗೀನಾ ಹಾಗೂ ಫೌಜೀಯಾ ಭಾನು ಅವರಿಗೆ ಸಮಿತಿಯ ವತಿಯಿಂದ ಪೀಠೋಪಕರಣ, ಆಹಾರ ಧಾನ್ಯ ವಿತರಿಸಿ ಮಾತನಾಡಿದರು.
ನಿವೇಶನ: ಇವರಲ್ಲಿ 3 ಕುಟುಂಬದವರಿಗೆ ಈಗಾಗಲೇ ಜೈಲ್ ಬಿಲ್ಡಿಂಗ್ ಪಕ್ಕದಲ್ಲಿ ನಿವೇಶನ ಹಾಗೂ ಮನೆ ನಿರ್ಮಿಸಲು ಧನಸಹಾಯ ನೀಡಿದ್ದೇವೆ. ಒಂದು ಕುಟುಂಬದವರಿಗೆ ಪರಿಹಾರ ರೂಪದಲ್ಲಿ ರು. 55,000 ನೀಡಲಾಗಿದೆ. ದೇವಸ್ಥಾನ ನಿರ್ಮಿಸಲು ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಕೋಟೆ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ವಿ. ವಸಂತ ಕುಮಾರ್, ಸದಸ್ಯ ರಾಜೇಂದ್ರ, ವೈ.ಎನ್. ಇಂದುಶೇಖರ, ಬಾವಿಹಟ್ಟಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.