ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಂಬಿಕೆಯ ಮೇಲೆ ಸಾಮರಸ್ಯ ನಿಂತಿದೆ

Rashmi Kasaragodu
Updated On : 16 Nov 2013, 11:34 am

ಚಿಕ್ಕಮಗಳೂರು: ಶ್ರದ್ಧಾಭಕ್ತಿ ಹಾಗೂ ನಂಬಿಕೆಗಳ ಅಸ್ಥಿಭಾರದ ಮೇಲೆ ಕೌಟುಂಬಿಕ ಸಾಮರಸ್ಯ, ಬದುಕು ನೆಮ್ಮದಿ ನಿಂತಿದೆ ಎಂದು ವಿಶ್ರಾಂತ ಉಪನ್ಯಾಸ ಬಿ. ತಿಪ್ಪೇರುದ್ರಪ್ಪ ಹೇಳಿದ್ದಾರೆ.
ಕದ್ರಿಮಿದ್ರಿ ಬಳಿ ಇರುವ ಆದಿಶಕ್ತಿ ನಗರದ ಜೀವನ ಸಂಧ್ಯಾವೃದ್ಧಾಶ್ರಮದಲ್ಲಿ ಗುರುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕನ್ನಡ ರಾಜ್ಯೊತ್ಸವ ಮಾಸಾಚರಣೆಯ 14ನೇ ದಿನದ ಕಾರ್ಯಕ್ರಮದಲ್ಲಿ ಪು.ತಿ. ನರಸಿಂಹಾಚಾರ್- ಬದುಕು ಬರಹ ಕುರಿತು ಮಾತನಾಡಿದ ಅವರು, ಇಂದಿನ ವೇಗದ ಬದುಕಿನಲ್ಲಿ ಎದುರಾಗುವ ಎಲ್ಲಾ ವ್ಯಾದಿಗಳಿಗೆ ಪು.ತಿ. ನರಸಿಂಹಾಚಾರ್ಯರ ವೈಯಕ್ತಿಕ ಬದುಕು ಮತ್ತು ಅವರ ಕವಿತೆಗಳು ಸಿದ್ಧೌಷದವಾಗಬಲ್ಲವು ಎಂದು ಹೇಳಿದರು.
ಹರನ ಎದೆಯಲ್ಲಿ ಹರಿ, ಹರಿ ಎದೆಯಲ್ಲಿ ಹರ ಎಂಬುದಾಗಿ ನಂಬಿದ್ದ ಪು.ತಿ. ನರಸಿಂಹಾಚಾರ್ಯರು ಉರಿಯುವ ಬಿಸಿಲಿರಲಿ, ಕೊರೆಯುವ ಚಳಿಯಿರಲಿ ದೇವರಲ್ಲಿ ಭಾವ ನೆಟ್ಟಾಗ ಬದುಕಿನ ಭಾರ ಇಳಿದಂತಾಗುತ್ತದೆ. ಇವರ ಕಾವ್ಯ ಸಂದೇಶ ವೃದ್ಧಾಶ್ರಮದ ವಾಸಿಗಳಿಗೆ ಸಂಜೀವಿನಿಯಾಗಬಲ್ಲದು, ನೊಂದ ಮನ್ಸಸಿಗೆ ತಂಪರೆಯ ಬಲ್ಲದು ಎಂದರು.
ಇಲ್ಲಿನ ವೃದ್ಧಾಶ್ರಮ ಉತ್ತಮ ಪರಿಸರ ಸೌಲಭ್ಯಗಳನ್ನು ಹೊಂದಿದ್ದು. ಆಡಳಿತ ಮಂಡಳಿಯ ಮನೆ ಬೇರೆ ಅಲ್ಲ, ಆಶ್ರಮ ಬೇರೆ ಅಲ್ಲ ಅನ್ನುವ ರೀತಿ ನಡೆಸಿಕೊಂಡು ಹೋಗುತ್ತಿರುವದು ಅನುಕರಣಿಯ ಎಂದ ತಿಪ್ಪೇರುದ್ರಪ್ಪ ಅವರು, ವೃದ್ಧಾಶ್ರಮದಲ್ಲಿ ಅನೇಕ ವಿದ್ಯಾವಂತ ಇಳಿವಯಸ್ಸಿನವರಿದ್ದು, ಅವರಿಗೆ ಓದುವ ಸೌಲಭ್ಯ ಕಲ್ಪಿಸುವ ಸಲುವಾಗಿ ಗ್ರಂಥಾಲಯವೊಂದನ್ನು ತೆರೆಯಲು ಸಲಹೆ ನೀಡಿದರು.
ಸಾಹಿತ್ಯ ಮತ್ತು ಓದು ಶಾಶ್ವತ ಆನಂದ ನೀಡುವುದಲ್ಲದೇ ಪ್ರೀತಿ ಒರೆದ ಬತ್ತಿದ ಬದುಕಿನಲ್ಲಿ ಪ್ರೀತಿಯ ಸೆಲೆಗಳಾಗಿ ಪುಸ್ತಕಗಳು ಮನಸ್ಸಿಗೆ ಮುದ ನೀಡುತ್ತದೆ ಎಂದು ತಿಳಿಸಿದರು.
ಜೀವನ ಸಂಧ್ಯಾ ಸಂಸ್ಥೆಯ ಅಧ್ಯಕ್ಷ ಗುರುಮೂರ್ತಿ ಅವರು ಮಾತನಾಡಿ, ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಕಡ್ಡಾಯಗೊಳಿಸಿದಾಗ ಮಾತ್ರ ಭಾಷೆಯ ಉಳಿವು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ನಾ.ಸು. ಶಿವಸ್ವಾಮಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಮಾಸಾಚರಣೆಯು ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು, ಕನ್ನಡಾಭಿಮಾನಿಗಳ ಸ್ಪಂದನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು. ಎಂ. ಶಂಕರಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement