'ನಿರುದ್ಯೋಗಿಗಳಿಗೆ ತರಬೇತಿ ನೀಡುತ್ತಿರುವ ಬ್ಯಾಂಕ್'
ಚಿಕ್ಕಮಗಳೂರು: ಗ್ರಾಮೀಣ ಪ್ರದೇಶದಲ್ಲಿ ರೂರಲ್ ಕ್ಲಿನಿಕ್, ಶಾಲಾ ಶೌಚಾಲಯ, ನಿರುದ್ಯೋಗಿಗಳಿಗೆ ತರಬೇತಿ ಸಂಸ್ಥೆ, ಹೆಣ್ಣುಮಕ್ಕಳ ಸ್ವಾವಲಂಬನೆಗೆ ನೆರವು ನೀಡುವ ಹತ್ತಾರು ಗ್ರಾಮೀಣ ಸಬಲೀಕರಣ ಯೋಜನೆಗಳ ಮೂಲಕ ಕೆನರಾ ಬ್ಯಾಂಕ್ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದು ಬೆಂಗಳೂರು ಪ್ರಧಾನ ಕಚೇರಿಯ ಮಹಾ ಪ್ರಬಂಧಕ ಎಸ್.ಎಸ್. ಭಟ್ ಹೇಳಿದ್ದಾರೆ.
ನಗರದ ಶ್ರೀ ಭುವನೇಂದ್ರ ವಿದ್ಯಾಸಂಸ್ಥೆಗೆ ಸುಮಾರು 2.5 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, 1906 ರಲ್ಲಿ ಮಂಗಳೂರಿನಲ್ಲಿ ಸುಬ್ರಾಯ ಪೈ ಬ್ಯಾಂಕ್ ಆರಂಭಿಸುವ ಮುನ್ನವೇ ಹೆಣ್ಣುಮಕ್ಕಳ ಶಿಕ್ಷಣ ತರಬೇತಿಗೆ ಶ್ರಮಿಸಿದವರು. ಪ್ರಸ್ತುತ ಸಿ.ಎಸ್.ಆರ್. ಹಾಗೂ ಡಬ್ಲ್ಯೂಇಡಿ ಪ್ರತ್ಯೇಕ ವಿಭಾಗಗಳ ಮೂಲಕ ಬ್ಯಾಂಕ್ ಜನರಿಗೆ ನೆರವು ನೀಡುತ್ತಿದೆ ಎಂದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್. ದಿನಕರರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಉಪ ಮಹಾ ಪ್ರಬಂಧಕ ಎಂ.ಎಂ. ಚಿನಿವಾರ, ಮುಖ್ಯ ಪ್ರಬಂಧಕ ರಘುನಾಥ, ವ್ಯವಸ್ಥಾಪಕ ರಮಾಕಾಂತ ಯಾದವ್, ಶಿಕ್ಷಣ ತಜ್ಞೆ ಡಾ. ಮೀರಾ ಮಹಾಲೆ, ಟ್ರಸ್ಟಿ ಡಾ. ರವೀಂದ್ರ ಪೈ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಬಿ.ಎಚ್. ನರೇಂದ್ರ ಪೈ ಪ್ರಾಸ್ತಾವಿಸಿ ಮಾತನಾಡಿದರು.