ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಹಕಾರ ಸಂಘ: ಶೇ.25ರಷ್ಟು ಸಾಲ ನೀಡಲು ಸೂಚನೆ

Rashmi Kasaragodu
Updated On : 16 Nov 2013, 11:31 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ನ.15
ಸಹಕಾರ ಸಂಘಗಳಲ್ಲಿರುವ ಶೇ.25 ರಷ್ಟು ಹೊಸ ಸದಸ್ಯರಿಗೆ ಸಾಲ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಸಹಕಾರ ಸಚಿವ ಎಚ್.ಎಸ್. ಮಹಾದೇವಪ್ರಸಾದ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ನಡೆದ 60ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆ 6 ಕೋಟಿ. ಇದರಲ್ಲಿ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವವರ ಸಂಖ್ಯೆ 2 ಕೋಟಿ. ರಾಜ್ಯದಲ್ಲಿ 65 ಲಕ್ಷ ರೈತರಿದ್ದು, ಇವರಲ್ಲಿ 20 ಲಕ್ಷ ರೈತರು ಮಾತ್ರ ಸಹಕಾರ ಸಂಘ ಮತ್ತು ಬ್ಯಾಂಕ್ಗಳ ಮೂಲಕ ಸಾಲವನ್ನು ಪಡೆದುಕೊಂಡಿದ್ದಾರೆ. ಇನ್ನುಳಿದ ರೈತರು ವಾಣಿಜ್ಯ ಬ್ಯಾಂಕ್ಗಳ ಮೇಲೆ ಅವಲಂಭಿತರಾಗಿದ್ದಾರೆ ಎಂದರು.
1300 ಕೋಟಿ ಬಿಡುಗಡೆ: ಕಳೆದ ವರ್ಷದಲ್ಲಿ ಮಳೆಯ ವೈಫಲ್ಯತೆಯಿಂದಾಗಿ ರಾಜ್ಯದ 147 ತಾಲೂಕುಗಳಲ್ಲಿ ಬರಗಾಲ ಬಂದಿತ್ತು. ಈ ಪ್ರದೇಶದಲ್ಲಿರುವ ರೈತರ 25 ಸಾವಿರದವರೆಗೆ ಸಾಲವನ್ನು ಮನ್ನಾ ಮಾಡಲಾಗಿದ್ದು, ಇದಕ್ಕಾಗಿ 1300 ಕೋಟಿ ಬಿಡುಗಡೆ ಮಾಡಲಾಗಿದ್ದು, 11 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಿದೆ. ಇನ್ನುಳಿದ 4 ಲಕ್ಷ ರೈತರಿಗೆ ಇದರ ಪ್ರಯೋಜನ ಸಿಗಬೇಕಾಗಿದ್ದು, ಇದಕ್ಕೆ 900 ಕೋಟಿ ಬೇಕಾಗಿದೆ ಎಂದು ಹೇಳಿದರು.
ರಾಜ್ಯ ಬಜೆಟ್ಗೆ ಇನ್ನು ಅನುಮೋದನೆ ಸಿಕ್ಕಿಲ್ಲ. ಅದುದರಿಂದ ಅಪೆಕ್ಸ್ ಬ್ಯಾಂಕ್ನಿಂದ ಸಾಲ ಪಡೆದು ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿರುವ ಬ್ಯಾಂಕ್ಗಳಿಗೆ ನೀಡಲಾಗಿದೆ ಎಂದ ಸಚಿವರು, ಹಿಂದಿನ ಸರ್ಕಾರ ತರಾತುರಿಯಲ್ಲಿ ಸಾಲ ಮನ್ನಾದ ತೀರ್ಮಾನ ತೆಗೆದುಕೊಂಡಿದ್ದರಿಂದ ಇದೀಗ ಹಣ ಬಿಡುಗಡೆಗೆ ವಿಳಂಬವಾಗುತ್ತಿದೆ ಎಂದರು.
8000 ಕೋಟಿ ಸಾಲದ ಗುರಿ: ಪ್ರಸಕ್ತ ಸಾಲಿನಲ್ಲಿ ರೈತರಿಗೆ 8000 ಕೋಟಿ ಸಾಲ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಹಿಂದೆ ಸಾಲ ಪಡೆದಿರುವವರೆ ಮತ್ತೆ ಮತ್ತೆ ಸಾಲವನ್ನು ಪಡೆಯತ್ತಿದ್ದರು. ಈ ವಿಷಯ ಗಮನಕ್ಕೆ ಬಂದಿದ್ದರಿಂದ ಸಂಘದ ಹೊಸ ಸದಸ್ಯರಿಗೆ ಅಂದರೆ ವರ್ಷದಲ್ಲಿ ಶೇ.25 ರಷ್ಟು ಹೊಸ ಸದಸ್ಯರಿಗೆ ಸಾಲ ನೀಡುವಂತೆ ಸಹಕಾರ ಬ್ಯಾಂಕ್ಗಳಿಗೆ ನಿರ್ದೇಶನ ನೀಡಲಾಗಿದೆ. ರೈತರ ಸಾಲದ ಸಬ್ಸಿಡಿ 900 ಕೋಟಿಯನ್ನು ಬ್ಯಾಂಕ್ಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯಕಾರಿ ಸಮಿತಿಯಲ್ಲಿ  ಈ ಹಿಂದೆ 9 ಮಂದಿ ಇದ್ದರು. ಇದೀಗ ಈ ಸಂಖ್ಯೆಯನ್ನು 11ಕ್ಕೆ ಏರಿಸಲಾಗಿದೆ.ಈ ಆದೇಶ ಬರುವ ಮುನ್ನ ರಾಜ್ಯದಲ್ಲಿ ಸುಮಾರು 3000 ಸಹಕಾರ ಸಂಘಗಳಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದಿದ್ದು ಇನ್ನುಳಿದ ಸಂಘಗಳಿಗೆ ಹೊಸ ನಿಯಮದ ಪ್ರಕಾರ ಚುನಾವಣೆಯನ್ನು ನಡೆಸಲಾಗುವುದು ಎಂದು ಹೇಳಿದರು.
ಬಲವಂತ ಸಾಲ ವಸೂಲಿ ಬೇಡ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಕೆಲವು ತಾಲೂಕುಗಳು ಅತಿವೃಷ್ಟಿಗೆ, ಮತ್ತೆ ಕೆಲವು ತಾಲೂಕುಗಳು ಅನಾವೃಷ್ಟಿಗೆ ಒಳಗಾಗಿದ್ದು, ಅಡಿಕೆ, ಕಾಫಿ, ತೆಂಗು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ರೈತರು ಸಾಲವನ್ನು ಮರುಪಾವತಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಅದುದರಿಂದ ಬಲವಂತವಾಗಿ ಸಾಲ ವಸೂಲಿ ಮಾಡಬಾರದು ಎಂದು ಸಹಕಾರ ಸಂಘಗಳಿಗೆ ಸೂಚನೆ ನೀಡಿದರು.
2300 ಕೋಟಿ ಬೆಳೆ ಸಾಲ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ಮಾತನಾಡಿ, ಆರ್ಬಿಐ ರೈತರಿಗೆ ನೀಡುತ್ತಿರುವ ಸಾಲ ಶೇ.60 ಮೀರಬಾರದೆಂದು ಹೇಳಿದ್ದರೂ ಕೂಡ ಸಹಕಾರ ಬ್ಯಾಂಕ್ಗಳು ಶೇ.86 ರಷ್ಟು ಸಾಲ ನೀಡಿವೆ. ಆದರೆ, ವಾಣಿಜ್ಯ ಬ್ಯಾಂಕ್ಗಳು ಶೇ.11 ರಷ್ಟು ಮಾತ್ರ ಸಾಲ ನೀಡುವ ಗುರಿ ಮುಟ್ಟಿದೆ ಎಂದ ಅವರು, ಸರ್ಕಾರ ಶೂನ್ಯ ಬಡ್ಡಿಯಲ್ಲಿ 2 ಲಕ್ಷವರೆಗೆ ಸಾಲ ನೀಡುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಅದುದರಿಂದ ಸಾಲ ಮನ್ನಾ ಮಾಡಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಅಪೆಕ್ಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್. ರಮಣರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ರಾಜಶೇಖರ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಟಿ.ವಿ. ಶಿವಶಂಕರಪ್ಪ, ರಾಜ್ಯ ವಿಮಾ ಸಹಕಾರ ಸಂಘದ ನಿರ್ದೇಶಕ ಶಿವಣ್ಣ, ಜಿ.ಎಸ್. ಮಹಾಬಲ, ಬಿ.ಸಿ. ಗೀತಾ ಹಾಗೂ ಡಾ. ಡಿ.ಎಲ್. ವಿಜಯಕುಮಾರ್ ಉಪಸ್ಥಿತರಿದ್ದರು.
ಅಪೆಕ್ಸ್ ಬ್ಯಾಂಕ್ನ ನಿರ್ದೇಶಕ ಎಸ್.ಎನ್. ರಾಮಸ್ವಾಮಿ  ಸ್ವಾಗತಿಸಿದರು. ಬಿ.ಸಿ. ಲೋಕಪ್ಪಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದಸ್ವಾಮಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement