ಕಲುಷಿತ ನೀರು ಸೇವನೆ: 5 ಮಂದಿ ಆಸ್ಪತ್ರೆಗೆ
ಮೊಳಕಾಲ್ಮುರು: ತಾಲೂಕಿನ ನಾಗಸಮುದ್ರದಲ್ಲಿ ಕಾಣಿಸಿಕೊಂಡಿರುವ ವಾಂತಿ ಭೇದಿ ಪ್ರಕರಣದಿಂದಾಗಿ 5 ಜನರು ಅಸ್ವಸ್ಥರಾಗಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲ ದಿನಗಳ ಹಿಂದೆಯೂ ಇಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು, ಅಂದು 7 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಪಡೆದು ಗುಣಮುಖರಾದ ಕೆಲವೇ ದಿನಗಳಲ್ಲಿ ಅಂತಹುದೇ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿರುವುದು ಸಾರ್ವಜನಿಕರಲ್ಲಿ ಭೀತಿ ಆವರಿಸಿದೆ. ಈ ಪ್ರಕರಣಕ್ಕೆ ಕಲುಷಿತ ನೀರು ಸೇವನೆಯೇ ಕಾರಣ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಭಾವತಿ, ಬಾಬು, ನಾಗೇಶ, ರಾಮಾಂಜಿನಿ, ರಾಜರಾಜೇಶ್ವರಿ ವಾಂತಿ ಭೇದಿಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಪಂನವರು ಗ್ರಾಮದಲ್ಲಿ ಕುಡಿಯುವ ನೀರು
ಸರಬರಾಜು ಮಾಡಲಾಗುತ್ತಿರುವ ವಾಲ್ಗಳಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ಪತ್ತೆ ಹಚ್ಚಿ ದುರಸ್ತಿಗೊಳಿಸಿದ್ದಾರೆ. ಅಲ್ಲದೆ ನೀರಿನ ಟ್ಯಾಂಕುಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ.
ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಿರುವ ಗ್ರಾಪಂ ನವರು ವಾಂತಿಭೇದಿ ಪ್ರಕರಣಕ್ಕೆ ನಿಖರ ಮಾಹಿತಿ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.