ಚಿಕ್ಕಮಗಳೂರಿಗೆ ರೈಲು, ಕಾಂಗ್ರೆಸ್ ಕೊಡುಗೆ
ಚಿಕ್ಕಮಗಳೂರು: ಕಾಫಿಯ ತವರೂರು ಚಿಕ್ಕಮಗಳೂರಿನಿಂದ ಇನ್ನೆರಡು ದಿನದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದ್ದು, ಇದು, ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ನ. 19 ರಂದು ಕಡೂರು- ಚಿಕ್ಕಮಗಳೂರು ರೇಲ್ವೆ ಮಾರ್ಗ ಉದ್ಘಾಟನೆಯಾಗಲಿದ್ದು, ಈ ಸಂಬಂಧ ಸಂಸದರು ಶನಿವಾರ ಚಿಕ್ಕಮಗಳೂರು ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಪೂರ್ವಸಿದ್ಧತೆಯ ಬಗ್ಗೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಲವು ದಶಕದ ಕನಸು: ಚಿಕ್ಕಮಗಳೂರಿಗೆ ರೈಲು ಬರಬೇಕೆಂಬುದು ಹಲವು ದಶಕದ ಕನಸು. ಈ ರೇಲ್ವೆ ಕಾಮಗಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆಚ್ಚು ಅನುದಾನ ಮಂಜೂರಾಗಿದೆ. ಬಿಜೆಪಿ, ಜೆಡಿಎಸ್ ಅಧಿಕಾರದಲ್ಲಿದ್ದಾಗ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಮಂಜೂರಾಗಿರಲಿಲ್ಲ. ತಮ್ಮ ಅವಧಿಯಲ್ಲಿ ಹೆಚ್ಚು ಅನುದಾನ ತರಲಾಗಿದೆ. ಇದು, ಕಾಂಗ್ರೆಸ್ ಕೊಡುಗೆ ಎಂದು ಹೇಳಿದರು.
ಚಿಕ್ಕಮಗಳೂರಿಗೆ ರೈಲು ಬರಬೇಕೆಂಬ ಕನಸು ಮಂಗಳವಾರ ನನಸಾಗಲಿದ್ದು, ಇದೊಂದು ಐತಿಹಾಸಿಕ ದಿನ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಜನ್ಮ ದಿನಾಚರಣೆ ದಿನ ಕೊಡುಗೆಯಾಗಿ ಈ ರೈಲು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದುತಿಳಿಸಿದರು.
ಮುಂದಿನ ರೇಲ್ವೆ ಬಜೆಟ್ ಚಿಕ್ಕಮಗಳೂರು- ಸಕಲೇಶಪುರ ನೂತನ ರೇಲ್ವೆ ಕಾಮಗಾರಿಗೆ ಹೆಚ್ಚಿನ ಹಣ ತರಲಾಗುವುದು. ಈ ನೂತನ ಮಾರ್ಗದಿಂದ ಇನ್ನಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ಗಣ್ಯರ ಆಗಮನ: ವಿಪ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ನ. 19 ರಂದು ನಡೆಯಲಿರುವ ರೈಲು ಮಾರ್ಗ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಚಿವ ಮುನಿಯಪ್ಪ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಶೇಖರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಪಕ್ಷದ ಮುಖಂಡ ಬಿ.ಎಂ. ಸಂದೀಪ್, ವೆಂಕಟೇಶ್ ನಾಯ್ಡು, ಶಾಂತೇಗೌಡ, ನಗರಸಭಾ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.