ದಲಿತರ ಮೇಲೆ ಹಲ್ಲೆ: ಬಂಧನಕ್ಕೆ ಮನವಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವವರನ್ನು ಬಂಧಿಸುವಂತೆ ದಲಿತ ಪರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಅವರ ನೇತೃತ್ವದಲ್ಲಿ ದಲಿತ ಮುಖಂಡರು ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಬಾಳೆಹೊನ್ನೂರು ಸಮೀಪದ ಖಾಂಡ್ಯ ಅರಣ್ಯ ತಪಾಸಣಾ ಕೇಂದ್ರದ ಬಳಿ ನ. 2 ರಂದು ಕೆ. ಭರತ್ ಎಂಬುವವರ ಮೇಲೆ ಕೋಮುವಾದಿಗಳು ಹಲ್ಲೆ ನಡೆಸಿ, ಜಾತಿ ನಿಂಧನೆ ಮಾಡಿ, ದರೋಡೆ ಮಾಡಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈ ವರೆಗೆ ಸಂಬಂಧಿತ ಆರೋಪಿಗಳನ್ನು ಬಂಧಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಕೆ. ಭರತ್ ವಿರುದ್ಧ ಮಲ್ಲಂದೂರು ಠಾಣೆಯಲ್ಲಿ ದಾಖಲಾಗಿರುವ ಸುಳ್ಳು ಕೇಸನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಮರ್ಲೆ ಅಣ್ಣಯ್ಯ, ನಂಜುಂಡಪ್ಪ, ಚಂದ್ರಪ್ಪ, ಶೇಖರಪ್ಪ, ಇಲಿಯಾಸ್ ಅಹಮದ್ ಶರೀಪ್, ವಿ. ಧರ್ಮೇಶ್, ಜೆಡಿಎಸ್ ಮುಖಂಡ ಕೆ. ಭರತ್ ಹಾಜರಿದ್ದರು.