ಭ್ರಷ್ಟಾಚಾರ ನಿರ್ಮೂಲನೆಯಾಗಲಿ: ಸಂಸದ ಜಯಪ್ರಕಾಶ್ ಹೆಗ್ಡೆ
ಕ.ಪ್ರ.ವಾರ್ತೆ, ಶೃಂಗೇರಿ, ನ.16 ರಾಜಕಾರಣ ಪಾರದರ್ಶಕವಾಗಿದ್ದು, ಭ್ರಷ್ಟಾಚಾರ ಅದರಲ್ಲಿ ಸೇರಿಕೊಂಡಿರುವುದು ದುರದೃಷ್ಟ ಎಂದು ಸಂಸದ ಸಂಸದ ಜಯಪ್ರಕಾಶ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ಅವರು ಇಲ್ಲಿನ ಮಹಾತ್ಮಾ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹೃದಯ ಸಮ್ಮೇಳನದಲ್ಲಿ ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳಲ್ಲಿಯೂ ಭ್ರಷ್ಟಾಚಾರವಿದೆ. ಆದರೆ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಾಗ ಕೈ ತೋರಿಸುತ್ತಾರೆ. ನ್ಯಾಯಾಂಗದ ಬಗ್ಗೆ ಮಾತನಾಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಆದ್ದರಿಂದ ನ್ಯಾಯಾಂಗದದಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಪ್ರಸಂಗಗಳು ಇದ್ದರೂ ಯಾರೂ ಬಗ್ಗೆ ಚರ್ಚೆಗೆ ಸಿದ್ದರಿಲ್ಲ. ಈ ನಿಟ್ಟಿನಲ್ಲಿ ನ್ಯಾಯ ಸಿಗುವ ವ್ಯವಸ್ಥೆಯಿದ್ದರೆ ಚರ್ಚೆಯಾಗಬೇಕು ಎಂದರು.
ಸಂಘರ್ಷ ಸಲ್ಲ: ಜಾತಿ, ಧರ್ಮ ಧರ್ಮಗಳ ನಡುವಿನ ಸಂಘರ್ಷ ಒಳ್ಳೆಯದಲ್ಲ. ಯಾರೂ ಹುಟ್ಟುವಾಗ ಯಾರೂ ಇಂತಹ ಜಾತಿಯವರೆಂದು ಬರುವುದಿಲ್ಲ. ಶಾಲೆ, ಕಾಲೇಜುಗಳಲ್ಲಿ ಕೇಳುವುದಿಲ್ಲ. ಆದರೆ ಕೆಲಸಕ್ಕೆ ಸೇರುವಾಗ ಯಾವ ಜಾತಿಯವರೆಂದು ಕೇಳುತ್ತಾರೆ. ಚುನಾವಣೆ ವೇಳೆಯಲ್ಲಿ ಜಾತಿ ಮತದ ಲೆಕ್ಕಾಚಾರ ಹಾಕಲಾಗುತ್ತದೆ. ಇದು ಸಮಾಜದ ದೊಡ್ಡ ದುರಂತವಾಗಿದೆ ಎಂದು ವಿಷಾದಿಸಿದರು.
ಮನಸ್ಥಿತಿಯ ಬದಲಾವಣೆಯಿಂದ ಸಮಾಜವನ್ನು ಸುಸ್ಥಿತಿಗೆ ಕೊಂಡೊಯ್ಯಬಹುದಾಗಿದೆ. ಹೃದಯ ಹೃದಯಗಳ ನಡುವೆ ಉತ್ತಮ ಸಂಬಂಧವಿದ್ದರೆ ಪೊಲೀಸ್, ಕೋರ್ಟ್ಗಳ ಅವಶ್ಯಕತೆಯಿಲ್ಲ. ನಮ್ಮ ನಮ್ಮಲ್ಲಿ ದೋಷಗಳಿವೆ. ತಪ್ಪುಗಳು ಸಹಜ ಅವುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಆಗಲೇ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬಹುದು ಎಂದರು.
ಋಷಿ ಪ್ರಭಾಕರ್ ಜೀ ಮೊದಲಾದರು ಉಪಸ್ಥಿತರಿದ್ದರು. ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರೀಶಂಕರ್ ಅಧ್ಯಕ್ಷತೆ ವಹಿಸಿದ್ದರು.