ಹೋದಿರಾಯನ ಹಳ್ಳ ಪಥ ಪರಿವರ್ತನೆಗೆ ಟೆಂಡರ್
ತರೀಕೆರೆ: ಒಂದೆರೆಡು ತಿಂಗಳಲ್ಲೇ ತಾಲೂಕಿನ ಹೋದಿರಾಯನ ಹಳ್ಳ ಪಥ ಪರಿವರ್ತನೆ ಯೋಜನೆಯ ಕಾರ್ಯವನ್ನು ಆರಂಭಿಸಲಾಗುವುದು. ಸಂಬಂಧಿಸಿದ ಯೋಜನೆಗೆ ಇದ್ದ ಅಡತಡೆಗಳನ್ನು ನಿವಾರಿಸಲಾಗಿದ್ದು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ರಾಜ್ಯ ಭಾರಿ ನೀರಾವರಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಅವರು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪರಿಶೀಲಿಸಿದ ನಂತರ ತಾಲೂಕಿನ ಜಂಬದಹಳ್ಳ ಜಲಾಶಯ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಲಿಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಕೆಲವು ಕಡೆ ಕಳಪೆ ಕಾಮಗಾರಿ ನೆಡೆದಿದೆ. ರೈತರಿಗೆ ಪರಿಹಾರ ನೀಡದಿರುವುದು, ಪುನರ್ ವಸತಿ ಕಲ್ಪಿಸುವಲ್ಲಿ ವಿಫಲವಾಗಿರುವುದು ಇನ್ನು ಹಲವಾರು ರೀತಿಯ ಸಮಸ್ಯೆಗಳಿವೆ ಇವುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು
ಕಾಮಗಾರಿ ಚುರುಕುಗೊಳಿಸಿ: ನೀರಾವರಿ ಯೋಜನೆಗಳು ಪ್ರಾರಂಭಗೊಂಡರೂ ಸಹ ನೆನಗುದಿಗೆ ಬೀಳುತ್ತಿದೆ. ಏತ ನೀರಾವರಿ ಯೋಜನೆಗಳು ಇದೇ ಹಾದಿ ಹಿಡಿಯುತ್ತಿವೆ. ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳ್ಳಬೇಕಾದ ಯೋಜನೆಗಳು ನಿಧಾನಗತಿಯಲ್ಲಿ ಸಾಗಿದೆ. ಅವುಗಳ ಕಾಮಗಾರಿಯನ್ನು ಚುರುಕುಗೊಳಿಸುವ ಪ್ರಯತ್ನ ನೆಡೆದಿದೆ ಎಂದರು.
ಈ ಜಿಲ್ಲೆಯಲ್ಲಿ ಐದು ನದಿಗಳು ಹರಿದರೂ ಸಹ ಜಿಲ್ಲೆಯ ಜನತೆಗೆ ಕುಡಿಯುವ ನೀರು, ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಾವುದೇ ಯೋಜನೆಗಳು ಇದ್ದರೂ ಸಹ ಮೊದಲ ಅದ್ಯತೆ ಮೇರೆಗೆ ಸ್ಥಳೀಯ ಜನರಿಗೆ ಸೌಲಭ್ಯ ಕಲ್ಪಿಸಲಾಗುವುದು, ಈ ಸಂಬಂದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಎಂ.ಡಿ.ರುದ್ರಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಜಿ.ಗುರುಪಾದಸ್ವಾಮಿ, ಮುಖ್ಯ ಎಂಜಿನಿಯರ್ ಚಲುವರಾಜ್, ನವೀನ್ ಶೆಟ್ಟಿ, ಉಪವಿಭಾಗಾಧಿಕಾರಿ ಜಿ.ಅನುರಾಧ,
ರವಿಶಾನುಬೋಗ್ ಮತ್ತಿತರರು ಇದ್ದರು.