ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕನ್ನಡ ಸಾಹಿತ್ಯಕ್ಕೆ ಡಿವಿಜಿ ಕೊಡುಗೆ ಅಪಾರ'

Mainashree
Updated On : 18 Nov 2013, 11:42 am

ಕ.ಪ್ರ.ವಾರ್ತೆ, ಶೃಂಗೇರಿ, ನ.17 ಕನ್ನಡ ಸಾಹಿತ್ಯ ಲೋಕ ಕಂಡ ಶ್ರೇಷ್ಠ ಸಾಹಿತಿ ಡಿವಿಜಿ ಪತ್ರಕರ್ತ, ಚಿಂತಕ, ವಿಮರ್ಷಕರಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಿವಮೊಗ್ಗದ ಕಸ್ತೂರ್ಬಾ ಬಾಲಿಕಾ ಕಾಲೇಜಿನ ಪ್ರಾಧ್ಯಾಪಕ  ನಟೇಶ್ ತಿಳಿಸಿದರು.
ಅವರು ತೊರೆಹಡ್ಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚಾರಣೆ, ಶೈಕ್ಷಣಿಕ ಕಲಿಕಾ ಮೇಳ, ನುಡಿಚಿತ್ರ ಪ್ರದರ್ಶನ ಹಾಗೂ ಮಂಕುತಿಮ್ಮನ ಕಗ್ಗ -ಡಿವಿಜಿ ಬದುಕು ಬರಹ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.
ಜೀವನಾನುಭವ: ಕನ್ನಡ ಸಾಹಿತ್ಯದ ಮೇರು ಕೃತಿ, ಕನ್ನಡದ ಬೈಬಲ್ ಎಂದೇ ಹೇಳಬಹುದಾದ ಮಂಕುತಿಮ್ಮನ ಕಗ್ಗ ಕೇವಲ ಸಾಹಿತ್ಯ ಕೃತಿಯಾಗದೇ ಜೀವನಾನುಭವಗಳನ್ನು ಹೊಂದಿದೆ. ಇದು ಸಾಹಿತ್ಯದ ಹಲವಾರು ಮಜಲುಗಳನ್ನು ಒಳಗೊಂಡಿರುವ ಒಂದು ಶ್ರೇಷ್ಠ ಕೃತಿ ಎಂದರು.
ಕಗ್ಗ ಓದಿದವನಿಗೆ ಹಿತಾನುಭವ, ಆತನ ಚಿಂತನೆಗಳಿಗೆ ಬೆಳಕು, ಬದುಕಿಗೆ ಒಂದು ಸತ್ ಪ್ರಚೋದನೆ ನೀಡುತ್ತದೆ. ಮನುಷ್ಯ ಸಮಾಜದೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು ಎಂಬುದೇ ಇವರ ಮಹಾತತ್ವವಾಗಿತ್ತು. ಸಮಾಜದೊಂದಿಗೆ ಸಂಪರ್ಕವಿಲ್ಲದ ಮನುಷ್ಯನ ಬದುಕು ವ್ಯರ್ಥ. ಜೀವನದ ಅಂತರಂಗದ ಸೊಗಸು  ಸಂಸ್ಕೃತಿ, ಪುಸ್ತಕ ಪಾಂಡಿತ್ಯವೇ ವಿದ್ವತ್ತು ಎಂಬುದನ್ನು ತೋರಿಸಿಕೊಟ್ಟರು ಎಂದವರು ಹೇಳಿದರು.
ಅಧ್ಯಾತ್ಮಿಕ ಚಿಂತನೆ: ಕಗ್ಗವನ್ನು ಕೇವಲ ಸಾಹಿತ್ಯ ದೃಷ್ಟಿಯಿಂದ ನೋಡದೇ ಅದರಲ್ಲಿನ ಅಧ್ಯಾತ್ಮಿಕ ಚಿಂತನೆಗಳನ್ನು ಅಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
  ತನ್ನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವುದರ ಜೊತೆಗೆ ಸಾಮಾಜಿಕ ವೈಚಾರಿಕ ನಿಲವು ಮೂಡಿಸಲು ಪ್ರಯತ್ನಿಸಿದ್ದರು ಎಂದರು.
ಕಗ್ಗ ಕನ್ನಡ ಸಾಹಿತ್ಯದ ವಿಶಿಷ್ಟ ಕೃತಿ. ಇದು ಸಾಹಿತ್ಯದ ಹಲವಾರು ಮಜಲುಗಳನ್ನು ಒಳಗೊಂಡಿದೆ. ಎಲ್ಲಾ ವರ್ಗದ ಜನರು ಧೀಮಂತರಾಗಿ ಬೆಳೆಯಬೇಕು ಎಂಬುದೇ ಡಿವಿಜಿಯವರ ಆಶಯವಾಗಿತ್ತು. ಡಿವಿಜಿಯವರು ಯಾವುದೇ ವಿಚಾರ ತೆಗೆದುಕೊಂಡರೂ ಆ ವಿಷಯದ ಬಗ್ಗೆ ಆಳವಾದ ಚಿಂತನ ನಡೆಸುತ್ತಿದ್ದರು.
  ಹಲವಾರು ಆಯಾಮಗಳಿಂದ ವಿಚಾರ ಅವಲೋಕಿಸುವ ದೃಷ್ಟಿ ಹೊಂದಿದ್ದರು. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನೇ ನೀಡಿದರು. ಡಿವಿಜಿಯವರ ಸಾಹಿತ್ಯ ಸರ್ವಕಾಲಿಕವಾಗಿವೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಜಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನುಡಿಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ವಿನೋದಾ ಕುಮಾರಿ, ಪತ್ರಕರ್ತ ಪ್ರಭಾಕರ ಕಾರಂತ, ಶೇಷಗಿರಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನುಡಿಚಿತ್ರ ಕಲಾವಿದ ಶಂ.ನ. ಶೇಷಗಿರಿರವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement