ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೀವನದಲ್ಲಿ ನಂಬಿಕೆ, ವಿಶ್ವಾಸ ಅಗತ್ಯ

Mainashree
Updated On : 18 Nov 2013, 11:41 am

ಬಾಳೆಹೊನ್ನೂರು: ಜೀವನದಲ್ಲಿ ನಂಬಿಕೆ ವಿಶ್ವಾಸಗಳನ್ನು ಕಳೆದುಕೊಳ್ಳಬಾರದು. ಸಂಘಗಳು ಹೆಚ್ಚು ಸಂಘಟಿತವಾಗಿ ಪರಸ್ಪರ ಸಹಕಾರದೊಂದಿಗೆ ರಚನಾತ್ಮಕವಾಗಿ ಕೆಲಸ ಕಾರ್ಯ ನಿರ್ವಹಿಸಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಶ್ರೀ ಜಗದ್ಗುರು ರಂಭಾಪುರೀ ಪೀಠದ ಹಳೇ ವಿದ್ಯಾರ್ಥಿಗಳ ಸಂಘವನ್ನು ಭಾನುವಾರ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಬಾಳೆಹೊನ್ನೂರು ಶ್ರೀಪೀಠದಲ್ಲಿ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ, 500 ಮಕ್ಕಳ ವಾಸ್ತವ್ಯಕ್ಕಾಗಿ ಶ್ರೀ ಜಗದ್ಗುರು ಶಿವಾನಂದ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಮಾಡಲಾಗಿದೆ.
 ಇದರ ಜೊತೆಗೆ ಜೊತೆಗೆ ಲಿಂ. ಶ್ರೀ ರಂಭಾಪುರೀ ಜಗದ್ಗುರು ರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರಿಂದ ಪ್ರಾರಂಭಗೊಂಡ ಶ್ರೀ ಜಗದ್ಗುರು ರೇಣುಕಾಚಾರ್ಯ ಐ.ಟಿ.ಐ. ಕಾರ್ಯ ನಿರ್ವಹಿಸುತ್ತಿದೆ. ಸಹಸ್ರಾರು ಮಕ್ಕಳಿಗೆ ಓದುವ ವ್ಯವಸ್ಥೆ ಕಲ್ಪಿಸುವ ಆಕಾಂಕ್ಷೆ ತಮ್ಮದಾಗಿದೆ ಎಂದರು.
ಇಲ್ಲಿ ಮಕ್ಕಳು ಆದರ್ಶ ಸಂಸ್ಕೃತಿ ಧಾರ್ಮಿಕ ಮನೋಭಾವದೊಂದಿಗೆ ಓದುವುದರಿಂದ ಮುಂದಿನ ದಿನಗಳಲ್ಲಿ ರಾಷ್ಟ್ರದ ಸಂಪನ್ಮೂಲವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಸಾಮರಸ್ಯದಿಂದ ಕಾರ್ಯ ನಿರ್ವಹಿಸಿ: ವೀರಶೈವ ಧರ್ಮ ಪರಂಪರೆ ಸಹಸ್ರಾರು ವರ್ಷಗಳಿಂದ ನಡೆದು ಬಂದಿದೆ. ಇಲ್ಲಿನ ಗುರುಕುಲ ಶಿಕ್ಷಣ ನೀತಿ ಸಂಹಿತೆ ಕಠಿಣವಾಗಿ ಕಂಡು ಬಂದರೂ ಮುಂದಿನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಖಂಡಿತ ಸಹಕಾರಿ ಆಗಲಿದೆ. ಹಲವಾರು ಉತ್ತಮ ಧ್ಯೇಯೋದ್ದೇಶದಿಂದ ಪ್ರಾರಂಭವಾಗಿರುವ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಸಾಮರಸ್ಯದಿಂದ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.
ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಆರ್. ರಾಚಯ್ಯ, ಚಿತ್ರ ಕಲಾವಿದ ಯಶವಂತ ಹಿಬಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸುಳ್ಯ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಹಲಗೂರು ಬ್ರಹನ್ಮಠದ ರುದ್ರಮುನಿ ಶಿವಾಚಾರ್ಯರು, ಅಬ್ಬಿಗೇರಿಯ ಸೋಮಶೇಖರ ಶಿವಾಚಾರ್ಯರು, ಕಾರ್ಜುವಳ್ಳಿಯ ಶಂಭುಲಿಂಗ ಶಿವಾಚಾರ್ಯರು ಸೇರಿದಂತೆ ಆಲಮೇಲ, ಯಂಕಂಚಿ, ದೇವರಹಿಪ್ಪರಗಿ, ದೊಡ್ಡಸಾಗರ, ಮಮದಾಪುರ ವಿರಕ್ತಮಠದ ಶ್ರೀಗಳು ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ. ಗಿರೀಶ್ ಸ್ವಾಗತಿಸಿದರು, ಪಿ.ಆರ್. ಸದಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement