'ಶಾಸಕರ ವಿರುದ್ಧ ಪ್ರತಿಭಟನೆ ಮಾಡಲ್ಲ'
ನರಸಿಂಹರಾಜಪುರ: ಶಾಸಕ ಡಿ.ಎನ್. ಜೀವರಾಜ್ ಹಾಗೂ ಇತರ ಇಬ್ಬರು ಬಿಜೆಪಿ ಮುಖಂಡರ ಮೇಲೆ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸುತ್ತಿರುವುದರಿಂದ ಸದ್ಯಕ್ಕೆ ಕಾಂಗ್ರೆಸ್ ಪಕ್ಷವು ಪ್ರತಿಭಟನೆ ಅಥವಾ ರಸ್ತೆತಡೆ ಮಾಡುವುದಿಲ್ಲ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಟಿ.ಡಿ. ರಾಜೇಗೌಡ ತಿಳಿಸಿದರು.
ಮುತ್ತಿನಕೊಪ್ಪದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪೊಲೀಸರು ಕಾನೂನಿನ ಚೌಕಟ್ಟಿನೊಳಗೆ ತನಿಖೆ ಮಾಡುತ್ತಿದ್ದಾರೆ. ಪೊಲೀಸರ ಬಗ್ಗೆ ನಂಬಿಕೆ ಇದ್ದು, ತನಿಖೆ ಆಗುವವರೆಗೆ ಕಾಯುತ್ತೇವೆ ಎಂದು ತಿಳಿಸಿದರು.
ಹಣ ಬಿಡುಗಡೆ: ನರಸಿಂಹರಾಜಪುರ ತಾಲೂಕಿನಲ್ಲಿ ಅಡಕೆ ಕೊಳೆ ರೋಗದ ಪರಿಹಾರಕ್ಕಾಗಿ ಸರ್ಕಾರವು 1.93 ಕೋಟಿ ಬಿಡುಗಡೆ ಮಾಡಿದ್ದು, ರೈತರಿಗೆ ಹಂತ- ಹಂತವಾಗಿ ವಿತರಿಸಲಾಗುತ್ತಿದೆ ಎಂದರು.
ಉಜಿರೆ ಪ್ರಕರಣ: ಉಜಿರೆಯಲ್ಲಿ ಯವತಿ ಹತ್ಯೆ ಪ್ರಕರಣದಲ್ಲಿ ಅನಗತ್ಯವಾಗಿ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಹೆಸರನ್ನು ಸೇರಿಸುತ್ತಿರುವುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಜಿಪಂ ಮಾಜಿ ಸದಸ್ಯ ಬಿ.ಎಸ್. ಸುಬ್ರಮಣ್ಯ, ಮುಖಂಡ ಎಸ್.ಡಿ. ರಾಜೇಂದ್ರ, ಪಪಂ ಸದಸ್ಯೆ ಲೇಖಾ ವಸಂತ್, ಗ್ರಾಪಂ ಸದಸ್ಯರಾದ ಸಗೀರ್, ಬೆಳ್ಳಪ್ಪ ಇದ್ದರು.