ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದಿರಾ ಹುಟ್ಟುಹಬ್ಬದಂದು ಉದ್ಘಾಟನೆ: ಆಕ್ಷೇಪ

Rashmi Kasaragodu
Updated On : 19 Nov 2013, 11:34 am

ಚಿಕ್ಕಮಗಳೂರು: ಘೋಷಣೆ ಮಾಡಿ ಸುಮ್ಮನಿದ್ದವರ ಹುಟ್ಟು ಹಬ್ಬದ ದಿನದಂದೆ ಕಡೂರು- ಚಿಕ್ಕಮಗಳೂರು ರೈಲ್ವೆ ಮಾರ್ಗವನ್ನು ಲೋಕಾರ್ಪಣೆ ಮಾಡುತ್ತಿರುವುದು ಒಳ್ಳೆಯ ರಾಜನೀತಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.
ಚಿಕ್ಕಮಗಳೂರಿನ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ರಸ್ತೆಯ ಕಾಮಗಾರಿ ಕಳಪೆಯಾಗಿದೆ. ಟಿಕೆಟ್ ಕೌಂಟರ್ ಕೆಲಸ ಪೂರ್ಣಗೊಂಡಿಲ್ಲ ಎಂದು ನೂತನ ರೈಲ್ವೆ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಹಲವು ದಶಕಗಳ ನಿರೀಕ್ಷೆಯಂತೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ರೈಲು ಬರುತ್ತಿದೆ. ಕಾಲ ಕಾಲಕ್ಕೆ ಮುತುವರ್ಜಿ ವಹಿಸಿ ಹಣ ಬಿಡುಗಡೆ ಮಾಡಿದ್ದರೆ ಇಷ್ಟು ವರ್ಷ ಕಾಯಬೇಕಾಗಿರಲಿಲ್ಲ ಎಂದರು.
ಇಂದಿರಾ ನಿರ್ಲಕ್ಷ್ಯ: ರೈಲ್ವೆ ಉದ್ಘಾಟನಾ ಸಮಾರಂಭವನ್ನು ಕಾಂಗ್ರೆಸ್ ತನ್ನ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದೆ ಎಂದ ಅವರು, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು 1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರು ಜಿಲ್ಲಾ ಕೇಂದ್ರಕ್ಕೆ ರೈಲು ಸಂಪರ್ಕ ಕಲ್ಪಿಸಲಾಗುವುದೆಂದು ಹೇಳಿದ್ದರು. ಅವರು ಈ ಕ್ಷೇತ್ರದಲ್ಲಿ ಗೆದ್ದು ಮೂರುವರೆ ವರ್ಷಗಳ ಕಾಲ ಪ್ರಧಾನಮಂತ್ರಿಗಳಾಗಿದ್ದರು. ನಂತರದಲ್ಲಿ 5 ವರ್ಷ ರಾಜೀವ್ಗಾಂಧಿ ಪ್ರಧಾನಮಂತ್ರಿಯಾಗಿದ್ದರು. ಅವರುಗಳು ತಮ್ಮ ಅಧಿಕಾರದ ಅವಧಿಯಲ್ಲಿ ಈ ಯೋಜನೆಗೆ ಚಾಲನೆ ನೀಡುವ ಕೆಲಸ ಮಾಡಲಿಲ್ಲ. ಇದಕ್ಕೆ 1996ಲ್ಲಿ ಪ್ರಧಾನಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು ವೇಗ ಕೊಟ್ಟರು ಎಂದರು.
103 ಕೋಟಿ ಬಿಡುಗಡೆ: ತಾವು ಉಡುಪಿ- ಚಿಕ್ಕಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾಗ 40 ಕೋಟಿ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ತರಲಾಯಿತು ಎಂದರು.
ರೈಲ್ವೆ ಯೋಜನೆಗೆ 50/50ರ ಅನುಪಾತದಲ್ಲಿ ಹಣ ನೀಡುವ ಯೋಜನೆಯನ್ನು ಇಡೀ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದಿದ್ದು ರಾಜ್ಯ ಬಿಜೆಪಿ ಸರ್ಕಾರ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಹಣವನ್ನು ಬಿಡುಗಡೆ ಮಾಡಲಾಯಿತು. ಈ ಯೋಜನೆಯ ಒಟ್ಟು 319 ಕೋಟಿಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 103 ಕೋಟಿ ಬಿಡುಗಡೆಯಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರಿನಿಂದ ಸಕಲೇಶಪುರಕ್ಕೆ ರೈಲ್ವೆ ಮಾರ್ಗ ಕಲ್ಪಿಸಬೇಕು. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರೈಲನ್ನು ಓಡಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸಮಾವೇಶ: ಶಾಸಕ ಸಿ.ಟಿ. ರವಿ ಮಾತನಾಡಿ, ಕಡೂರು- ಚಿಕ್ಕಮಗಳೂರು ರೈಲ್ವೆ ಯೋಜನೆಗೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಕೊಡುಗೆ ಏನೆಂದು ಪ್ರಶ್ನಿಸಿದರು. ಕರ್ನಾಟಕ ಅದರಲ್ಲೂ ಚಿಕ್ಕಮಗಳೂರು ಜಿಲ್ಲೆ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿತ್ತು. ಆದರೆ, ಅವರು ಅದನ್ನು ಮರೆತರು. 35 ಕಿ.ಮೀ. ಹಳಿ ಹಾಕಲು 35 ವರ್ಷಗಳು ಕಾಯಬೇಕಾಯಿತು. ಉದ್ಘಾಟನಾ ಸಮಾರಂಭವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಪ್ರತಿಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement